Advertisement

ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳ್ಳಲಿ

02:27 PM Sep 24, 2019 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ತಾಲೂಕಿನ ಅನ್ನೆಹಾಳ್‌, ಹುಲ್ಲೂರು, ಮಾನಂಗಿ ಸಿದ್ದಾಪುರ, ಕಾಟಿಹಳ್ಳಿ, ಚಿಕ್ಕಪುರ, ಸಾದರಹಳ್ಳಿ, ಕಾತ್ರಾಳ್‌ ಕೆರೆಗಳು ಸುಮಾರು ಹತ್ತು ವರ್ಷಗಳಿಂದಲೂ ನೀರಿಲ್ಲದೆ ಸಂಪೂರ್ಣ ಒಣಗಿ ಹೋಗಿವೆ. ಇದರಿಂದ ಅಂತರ್ಜಲ ಬತ್ತಿ ಸುತ್ತಮುತ್ತಲಿನ ರೈತರ ತೋಟಗಳು ಬಾಡಿವೆ. ಸಾಲ ಮಾಡಿ ಕೊಳವೆಬಾವಿ ಕೊರೆಸಿರುವ ರೈತರು ಅತ್ತ ಬೆಳೆಯೂ ಇಲ್ಲ. ಇತ್ತ ನೀರೂ ಇಲ್ಲದೆ ಸಾಲ ತೀರಿಸಲು ಆಗದೆ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖಂಡರು ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗದಿಂದ ಭೀಮಸಮುದ್ರ ಮಧ್ಯಭಾಗದ ಕೆರೆಗಳನ್ನು ಯಾವುದಾದರೂ ಸ್ಕೀಂನಲ್ಲಿ ಸೇರಿಸಿ ನೀರು ತುಂಬಿಸಬೇಕು. ಬೆಳೆ ವಿಮೆ, ಬೆಳೆ ಪರಿಹಾರ, ಬರ ಪರಿಹಾರ ಮತ್ತು ಹಿಂದಿನ ಸರ್ಕಾರದ ಸಾಲ ಮನ್ನಾ ಯೋಜನೆ ಎಲ್ಲಾ ರೈತರಿಗೆ ವಿಸ್ತರಣೆಯಾಗಬೇಕು. ರೈತರಿಗೆ ಹೊಸ ಸಾಲ ನೀಡುವಂತೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶ ನೀಡಬೇಕು. ಮೂರ್‍ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ಬೆಳೆ ವಿಮೆ ಪಾವತಿಯಾಗಿಲ್ಲ. ಬೆಳೆ ವಿಮೆಗೆ ಏಳು ವರ್ಷದ ಮಾನದಂಡವನ್ನು ತಪ್ಪಿಸಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಒಂದು ವರ್ಷದ ಅವಧಿಗೆ ಮಿತಿಗೊಳಿಸುವಂತೆ ಒತ್ತಾಯಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಜಿಲ್ಲಾಧ್ಯಕ್ಷ ಎಲ್‌. ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಕುರುಬರಹಳ್ಳಿ ಜಿ.ಎಸ್‌. ಶಿವಣ್ಣ, ಉಪಾಧ್ಯಕ್ಷ ಬಸ್ತಿಹಳ್ಳಿನಾರಪ್ಪ, ಪ್ರಧಾನ ಕಾರ್ಯದರ್ಶಿ ಎಂ. ಸಿದ್ದಪ್ಪ, ಖಜಾಂಚಿ ಎನ್‌.ಜಿ. ಷಣ್ಮುಖಪ್ಪ, ಜಿ. ಪರಮೇಶ್ವರಪ್ಪ, ಎಚ್‌. ನಿರಂಜನಮೂರ್ತಿ, ವಿ. ಮಲ್ಲೇಶ್‌, ಎ.ಎಸ್‌. ಗುರುಸಿದ್ದಪ್ಪ, ಆರ್‌.ಎಚ್‌. ಮಹದೇವಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next