Advertisement

ಬ್ಯಾಂಕಿಂಗ್‌ ಸೌಲಭ್ಯ ಸದ್ಬಳಕೆಯಾಗಲಿ

02:23 PM Nov 03, 2019 | Suhan S |

ತರೀಕೆರೆ: ಇಂದಿನ ದಿನಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಅಗಾಧವಾಗಿ ವಿಸ್ತಾರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲಮನ್ನಾ ಯೋಜನೆಯೂ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ ಎಂದು ಲಿಂಗದಹಳ್ಳಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ವ್ಯವಸ್ಥಾಪಕ ಜಿತೇಂದ್ರಸಿಂಗ್‌ ಹೇಳಿದರು.

Advertisement

ತಿಗಡ ಗ್ರಾಪಂ ಆವರಣದಲ್ಲಿ ನಡೆದ ಭ್ರಷ್ಪಾಚಾರ ನಿರ್ಮೂಲನೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಜನೆ ಸದುಪಯೋಗ ಪಡೆದುಕೊಳ್ಳುವ ಮೂಲಕ ಗ್ರಾಹಕರು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಳ್ಳಬಹುದು ಎಂದರು. ಸರ್ಕಾರ ಸಾರ್ವಜನಿಕರ ಜೀವನಮಟ್ಟ ಸುಧಾರಿಸುವ ಸಲುವಾಗಿ ಸರ್ಕಾರದ ವಿವಿಧ ಇಲಾಖೆಯ ಮೂಲಕ ರೈತರು ವ್ಯಾಪಾರಸ್ಥರು ವಿದ್ಯಾರ್ಥಿಗಳು ಮುಂತಾದವರಿಗೆ ಸಾಲದ ಜತೆಗೆ ಸಹಾಯಧನವನ್ನೂ ಬ್ಯಾಂಕ್‌ ನೀಡುತ್ತಿದೆ. ಬ್ಯಾಂಕ್‌ಗಳು ನೀಡುವ ಸೌಲಭ್ಯ ಪಡೆಯಲು ಗ್ರಾಹಕರು ಮಧ್ಯವರ್ತಿಗಳ ಮೂಲಕ ಪ್ರಯತ್ನಿಸಬಾರದು. ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು. ಲಂಚ ನೀಡುವುದು ಪಡೆದುಕೊಳ್ಳುವಷ್ಟೇ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಬ್ಯಾಂಕ್‌ ಅಧಿಕಾರಿ ಸಿದ್ಧಾರ್ಥ ಮಾತನಾಡಿ, ಕೇಂದ್ರ ಸರ್ಕಾರ ಗ್ರಾಮೀಣ ಜನರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಸ್ವಾಸ್ಥ  ಬಿಮಾ ಯೋಜನೆ ಅಟಲ್‌ ಪೆನ್ಷನ್‌ ಯೋಜನೆ ಮುಂತಾದವುಗಳನ್ನು ಜಾರಿಗೆ ತಂದಿದ್ದು, ಕನಿಷ್ಟ ಹಣ ಹೂಡಿಕೆಯಿಂದ ಗರಿಷ್ಠ ಅನುಕೂಲ ಪಡೆದುಕೊಳ್ಳಬಹುದು. ಇಂಡಿನ್‌ ಓವರ್‌ಸೀಸ್‌ ಬ್ಯಾಂಕ್‌ ನಲ್ಲಿ ಶೂನ್ಯ ದರದಲ್ಲಿ ಖಾತೆಗಳನ್ನು ತೆರೆಯಬಹುದಾಗಿದ್ದು, ಎಟಿಎಂ ಮತ್ತು ರುಪೇ ಕಾರ್ಡ್‌ಗಳ ಸೌಲಭ್ಯ ಪಡೆಯಬಹುದು. ದೂರವಾಣಿ ಮೂಲಕ ಕರೆ ಮಾಡಿ ಬ್ಯಾಂಕ್‌ನಿಂದ ಕರೆ ಮಾಡಲಾಗುತ್ತಿದೆ ಎಂದು ಹೇಳಿ, ಖಾತೆಯ ವಿವರಗಳನ್ನು ನೀಡುವಂತೆ ತಿಳಿಸಿದರೆ ಯಾವುದೇ ಕಾರಣಕ್ಕೂ ನೀಡಬಾರದು. ವಿವರಗಳನ್ನು ನೀಡಿದಲ್ಲಿ ನಿಮ್ಮ ಖಾತೆಯಲ್ಲಿ ಇದ್ದ ಹಣವನ್ನು ಕೆಲ ಕ್ಷಣಗಳಲ್ಲೇ ಖಾಲಿ ಮಾಡುತ್ತಾರೆ ಎಂದರು.

ತಿಗಡ ಗ್ರಾಪಂ ಅಧ್ಯಕ್ಷೆ ಅಮುದ ಉಪಾಧ್ಯಕ್ಷ ಕೆ.ಮೂರ್ತಪ್ಪ, ಮಾಜಿ ಅಧ್ಯಕ್ಷ ಪಿ.ಎ.ಮನೋಜ್‌ ಕುಮಾರ್‌, ಸದಸ್ಯರಾದ ರಮೇಶ್‌ ನಾಯ್ಕ, ಕಾರ್ಯದರ್ಶಿ ಬಸವರಾಜಪ್ಪ, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ವಿವಿಧ ಗ್ರಾಮಗಳ ಮುಖಂಡರು, ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next