ಮಾನವನ ಆರೋಗ್ಯಕ್ಕೆ ತೀರಾ ಹಾನಿಕಾರಕವಾಗಿರುವ ಚೀನ ಬೆಳ್ಳುಳ್ಳಿಯನ್ನು ಕೇಂದ್ರ ಸರಕಾರ ಜನರ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ನಿಷೇಧಿಸಿದ್ದರೂ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಚೀನ ಬೆಳ್ಳುಳ್ಳಿಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ರಾಜ್ಯದಲ್ಲೂ ಇಂತಹ ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಆಹಾರ ಸುರಕ್ಷೆ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಭಾರೀ ಪ್ರಮಾಣದಲ್ಲಿ ನಿಷೇಧಿತ ಚೀನ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡಿವೆ. ಈ ಬೆಳವಣಿಗೆ ರಾಜ್ಯದ ಜನತೆಯಲ್ಲಿ ಒಂದಿಷ್ಟು ಗೊಂದಲಕ್ಕೆ ಕಾರಣವಾಗಿದ್ದು ಸ್ವದೇಶಿ ಮತ್ತು ಚೀನ ಬೆಳ್ಳುಳ್ಳಿಯ ನಡುವಣ ವ್ಯತ್ಯಾಸವನ್ನು ಗುರುತಿಸಲು ಗ್ರಾಹಕರಿಗೆ ಕಷ್ಟಸಾಧ್ಯವಾಗಿ ಪರಿಣಮಿಸಿದೆ.
ಚೀನ ಬೆಳ್ಳುಳ್ಳಿ ಗಾತ್ರದಲ್ಲಿ ದೊಡ್ಡದಾಗಿದ್ದು ಭಾರೀ ಪ್ರಮಾಣದಲ್ಲಿ ರಾಸಾಯನಿಕವನ್ನು ಇದಕ್ಕೆ ಸಿಂಪಡಿಸಲಾಗಿರುವುದರಿಂದ ಬೇಗನೇ ಹಾಳಾಗುವುದಿಲ್ಲ. ಅಷ್ಟು ಮಾತ್ರವಲ್ಲದೆ ದೇಸೀ ಬೆಳ್ಳುಳ್ಳಿಗಿಂತ ಅತೀ ಅಗ್ಗದಲ್ಲಿ ಈ ಬೆಳ್ಳುಳ್ಳಿ ಲಭಿಸುವುದರಿಂದ ಚಿಲ್ಲರೆ ಮಾರಾಟಗಾರರು ಮತ್ತು ಗ್ರಾಹಕರು ಈ ಬೆಳ್ಳುಳ್ಳಿಯ ಖರೀದಿಗೆ ಮುಂದಾಗುತ್ತಿದ್ದಾರೆ. ಸಾಮಾನ್ಯವಾಗಿ ಬೆಳ್ಳುಳ್ಳಿ ಸಮಯ ಕಳೆದಂತೆ ತನ್ನ ಭಾರವನ್ನು ಕಳೆದುಕೊಂಡರೆ ಚೀನ ಬೆಳ್ಳುಳ್ಳಿ ದೀರ್ಘ ಕಾಲ ಅದೇ ತೂಕವನ್ನು ಹೊಂದಿರುತ್ತದೆ. ದೊಡ್ಡ ಗಾತ್ರದ್ದಾಗಿರುವುದರಿಂದ ಇದರ ಸಿಪ್ಪೆಯನ್ನು ಬಿಡಿಸುವುದು ಕೂಡ ಸುಲಭವಾಗಿರುವುದರಿಂದ ಗ್ರಾಹಕರು ಈ ಬೆಳ್ಳುಳ್ಳಿಯ ಖರೀದಿಗೆ ಹೆಚ್ಚಿನ ಒಲವು ತೋರುತ್ತಾರೆ.
ಚೀನ ಬೆಳ್ಳುಳ್ಳಿಯನ್ನು ಸೇವಿಸುವವರ ಕಿಡ್ನಿ, ಲಿವರ್‌ಗೆ ಹಾನಿಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಈಗಾಗಲೇ ವೈದ್ಯರು ದೃಢ ಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಚೀನ ಬೆಳ್ಳುಳ್ಳಿಯ ಆಮದು ಮತ್ತು ಮಾರಾಟಕ್ಕೆ ನಿಷೇಧ ಹೇರಿದೆ. ಇದರ ಹೊರತಾಗಿಯೂ ರಾಜ್ಯದ ವಿವಿಧೆಡೆಗಳ ಮಾರುಕಟ್ಟೆಗಳಿಗೆ ಚೀನ ಬೆಳ್ಳುಳ್ಳಿ ಭಾರೀ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆಯಲ್ಲದೆ ದಿನಸಿ ಮಳಿಗೆಗಳಲ್ಲೂ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಕೆಲವು ವ್ಯಾಪಾರಸ್ಥರು ಅಧಿಕ ಲಾಭದಾಸೆಯಿಂದ ದೇಸೀ ಬೆಳ್ಳುಳ್ಳಿ ಯೊಂದಿಗೆ ನಿಷೇಧಿತ ಚೀನ ಬೆಳ್ಳುಳ್ಳಿಯನ್ನು ಸೇರಿಸಿ ಮಾರಾಟ ಮಾಡುತ್ತಿದ್ದಾರೆ.
ಚೀನ ಬೆಳ್ಳುಳ್ಳಿಯ ಆಮದು ಮತ್ತು ಮಾರಾಟಕ್ಕೆ ನಿಷೇಧ ಹೇರಿದ್ದರೂ ಇದು ಭಾರೀ ಪ್ರಮಾಣದಲ್ಲಿ ದೇಶದೆಲ್ಲೆಡೆ ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಿರುವುದು ಗ್ರಾಹಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿಷೇಧ ಕೇವಲ ಕಡತಕ್ಕೆ ಸೀಮಿತವಾ ಗಿದೆಯೇ ಅಥವಾ ಇನ್ನೂ ಕಳ್ಳಮಾರ್ಗದಲ್ಲಿ ಚೀನದಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳುವ ದಂಧೆಯಲ್ಲಿ ವ್ಯಾಪಾರಸ್ಥರು ತೊಡಗಿಕೊಂಡಿದ್ದಾರೆಯೇ ಎಂಬ ಸಂಶಯ ಜನರನ್ನು ಕಾಡತೊಡಗಿದೆ. ಇನ್ನೂ ಮಾರುಕಟ್ಟೆಗೆ ಚೀನ ಬೆಳ್ಳುಳ್ಳಿ ಪೂರೈಕೆ ಯಾಗುತ್ತಿರುವುದನ್ನು ಕಂಡಾಗ ನಿಷೇಧಕ್ಕೂ ಮುನ್ನ ಆಮದು ಮಾಡಿಕೊಳ್ಳಲಾದ ಚೀನ ಬೆಳ್ಳುಳ್ಳಿಯ ದಾಸ್ತಾನನ್ನು ಸಂಬಂಧಿತ ಇಲಾಖೆ ಸಂಪೂರ್ಣವಾಗಿ ಮುಟ್ಟು ಗೋಲು ಹಾಕಿಕೊಂಡಿಲ್ಲವೇ ಅಥವಾ ಇದನ್ನೇ ದಂಧೆಯಾಗಿಸಿಕೊಂಡಿರುವ ವ್ಯಾಪಾರಸ್ಥರು ಅಕ್ರಮವಾಗಿ ಚೀನ ಬೆಳ್ಳುಳ್ಳಿಯನ್ನು ದಾಸ್ತಾನು ಇರಿಸಿಕೊಂಡಿ ದ್ದಾರೆಯೇ ಎಂಬ ಸಂಶಯ ಸಹಜವಾಗಿಯೇ ಮೂಡು ತ್ತದೆ. ಇವೆಲ್ಲದರತ್ತ ಸಂಬಂಧಿತ ಇಲಾಖೆ, ಆಹಾರ ಸುರಕ್ಷೆ ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕು.
ನಿಷೇಧಿತ ಚೀನ ಬೆಳ್ಳುಳ್ಳಿಯನ್ನು ದೇಶದ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲು ಅಗತ್ಯ ಕ್ರಮಗಳನ್ನು ತತ್‌ಕ್ಷಣ ಕೈಗೊಳ್ಳಬೇಕು. ಜತೆಯಲ್ಲಿ ಇದರ ದಾಸ್ತಾನನ್ನೂ ಸಂಪೂರ್ಣವಾಗಿ ಮುಟ್ಟು ಗೋಲು ಹಾಕಿಕೊಳ್ಳು ವುದರ ಜತೆಯಲ್ಲಿ ಇದು ಅಡ್ಡಹಾದಿಯಲ್ಲಿ ಚೀನದಿಂದ ಆಮದುಗೊಂಡು ಕಾಳಸಂತೆಯ ಮೂಲಕ ಮಾರುಕಟ್ಟೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಬೇಕು. ಚಿಲ್ಲರೆ ವ್ಯಾಪಾರಿಗಳು ಕೂಡ ನಿಷೇಧಿತ ಚೀನ ಬೆಳ್ಳುಳ್ಳಿಯನ್ನು ತಿರಸ್ಕರಿಸುವ ಮೂಲಕ ಗ್ರಾಹಕರ ಹಿತರಕ್ಷಿಸಬೇಕು. ಇನ್ನು ಗ್ರಾಹಕರು ಈ ಬಗ್ಗೆ ಒಂದಿಷ್ಟು ಮುಂಜಾಗ್ರತೆ ವಹಿಸಬೇಕಿದ್ದು ಸಾಧ್ಯವಾದಷ್ಟು ಸಣ್ಣಗಾತ್ರದ ದೇಸೀ ಬೆಳ್ಳುಳ್ಳಿಯ ಖರೀದಿಗೆ ಒಲವು ತೋರಬೇಕು.