Advertisement

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

04:14 PM Dec 22, 2024 | Team Udayavani |

ಭಾರತದ ಜನಸಮುದಾಯದ ಸಾಮಾಜಿಕ-ಆರ್ಥಿಕ ಚಿತ್ರಣಗಳು ಬದಲಾಗುತ್ತಿವೆ. ಆರ್ಥಿಕ ಸ್ಥಿತಿಗತಿ ಮತ್ತು ಖರ್ಚು ಮಾಡುವ ಸಾಮರ್ಥ್ಯ ವೃದ್ಧಿಸಿದೆ. ಜನರು ಈಗ ತಮಗಾಗಿ ಮತ್ತು ಗುಣಮಟ್ಟದ ಜೀವನಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದಕ್ಕೆ ತಕ್ಕಂತೆ ನಾವು ಎದುರಿಸುವ ಕಾಯಿಲೆಗಳ ವಿಧಗಳು ಕೂಡ ಬದಲಾಗಿವೆ. ಈಗ ನಾವು ಸೋಂಕು ರೋಗಗಳ ಕಾಲಘಟ್ಟದಿಂದ ಮುಂದೆ ಸಾಗಿದ್ದೇವೆ. ಎಚ್‌ಐವಿ ಮತ್ತು ಕ್ಷಯ ರೋಗದ ವಿಷಯವಾಗಿ ಮಾತನಾಡುವುದು ಇನ್ನೂ ಕಡಿಮೆಯಾಗಿದೆ. ಹೃದ್ರೋಗಗಳು, ಮಧುಮೇಹದಂತಹ ಜೀವನ ಶೈಲಿಗೆ ಸಂಬಂಧಿಸಿದ ಅನಾರೋಗ್ಯಗಳ ಬಾಧೆ ಹೆಚ್ಚಿದೆ. ಕ್ಯಾನ್ಸರ್‌ ಕೂಡ ಇಂತಹ ಹೊಸ ಕಾಲಘಟ್ಟದ ಅನಾರೋಗ್ಯವಾಗಿದ್ದು, ವಿಭಿನ್ನ ರೋಗಶಾಸ್ತ್ರೀಯತೆಯನ್ನು ಹೊಂದಿದೆ.

Advertisement

ಬಹುತೇಕ ಅಂಗಗಳನ್ನು ಬಾಧಿಸುವ ಕ್ಯಾನ್ಸರ್‌ ನಾಲ್ಕು ಹಂತಗಳನ್ನು ಹೊಂದಿರುತ್ತದೆ. ಕಾಯಿಲೆ ಮುಂದುವರಿದಷ್ಟೂ ಚಿಕಿತ್ಸೆಯ ಪರಿಣಾಮ ಕಡಿಮೆಯಾಗುತ್ತದೆ. ಅಭಿವೃದ್ದಿ ಹೊಂದಿದ ಸಮಾಜಗಳಲ್ಲಿ ಕ್ಯಾನ್ಸರ್‌ನ್ನು ಬೇಗನೆ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ. ಆದರೆ ಭಾರತದಲ್ಲಿ ನಾವು ಸಾಮಾನ್ಯವಾಗಿ ಕ್ಯಾನ್ಸರನ್ನು 3 ಮತ್ತು 4ನೇ ಹಂತಗಳಲ್ಲಷ್ಟೇ ಪತ್ತೆಹಚ್ಚಲು ಶಕ್ತರಾಗುತ್ತಿದ್ದೇವೆ. ಈ ವಸ್ತುಸ್ಥಿತಿಯನ್ನು ನಾವು ಸ್ಥಾನಪಲ್ಲಟಗೊಳಿಸಿ, ಕ್ಯಾನ್ಸರನ್ನು ಬೇಗನೆ ಪತ್ತೆಹಚ್ಚುವಂತೆ ಮಾಡಬೇಕಿದೆ.

ಯಾವುದೇ ಅಂಗದ ಕ್ಯಾನ್ಸರನ್ನು 3 ಮತ್ತು 4ನೇ ಹಂತಗಳಲ್ಲಿ ಪತ್ತೆಹಚ್ಚಿದರೆ ಮುಂದಿನ 5 ವರ್ಷಗಳ ಕಾಲ ರೋಗಿ ಬದುಕುಳಿಯುವ ಸಾಧ್ಯತೆಗಳು ಕ್ಯಾನ್ಸರ್‌ ಬಾಧಿತ ಅಂಗವನ್ನು ಆಧರಿಸಿ ಶೇ. 30ರಿಂದ 60ರ ವರೆಗಿರುತ್ತವೆ. ಅದೃಷ್ಟವಶಾತ್‌, ಕ್ಯಾನ್ಸರನ್ನು 1 ಅಥವಾ 2ನೇ ಹಂತದಲ್ಲಿ ಪತ್ತೆ ಮಾಡಿದರೆ ಮುಂದಿನ 5 ವರ್ಷ ಬದುಕುಳಿಯುವ ಸಾಧ್ಯತೆ ಶೇ. 95ರವರೆಗೆ ಇರುತ್ತದೆ. ಚಿಕಿತ್ಸೆಯ ಉತ್ತಮ ಫ‌ಲಿತಾಂಶ ಮತ್ತು ಬದುಕುಳಿಯುವ ಸಾಧ್ಯತೆ ಮಾತ್ರವೇ ಅಲ್ಲದೆ; ಕ್ಯಾನ್ಸರನ್ನು ಅದರ ಆರಂಭಿಕ ಹಂತಗಳಲ್ಲಿ ಚಿಕಿತ್ಸೆಗೆ ಒಳಪಡಿಸುವ ಆರ್ಥಿಕ ಹೊರೆ ಕೂಡ ಕಡಿಮೆ ಇರುತ್ತದೆ. ಅಂದರೆ ಆರಂಭಿಕ ಹಂತಗಳಲ್ಲಿ ಇರುವ ಕ್ಯಾನ್ಸರ್‌ಗೆ ಚಿಕಿತ್ಸೆಗೆ ವ್ಯಯವಾಗುವ ಮೊತ್ತ ಕಡಿಮೆ.

ಆರಂಭಿಕ ಹಂತಗಳಲ್ಲಿರುವ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಉಂಟಾಗುವ ಗಾಯಗಳ ಪ್ರಮಾಣ, ಗಂಭೀರತೆ ಕೂಡ ಕಡಿಮೆ ಇರುತ್ತದೆ. ಉದಾಹರಣೆಗೆ, ನಾಲಗೆಯ ಕ್ಯಾನ್ಸರನ್ನು 1ನೇ ಹಂತದಲ್ಲಿ ಪತ್ತೆಹಚ್ಚಿದರೆ ಮಾತಿನ ಸಾಮರ್ಥ್ಯದ ಪುನರ್‌ಸ್ಥಾಪನೆಯ ಸಾಧ್ಯತೆಹೆಚ್ಚಿರುತ್ತದೆ. ಧ್ವನಿಪೆಟ್ಟಿಗೆಯ ಕ್ಯಾನ್ಸರನ್ನು 1ನೇ ಹಂತದಲ್ಲಿ ಪತ್ತೆಹಚ್ಚಿದರೆ ಮಾತಿನ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಕ್ಯಾನ್ಸರ್‌ಗಳನ್ನು ಸಾಧ್ಯವಾದಷ್ಟು ಅದರ ಆರಂಭಿಕ ಹಂತಗಳಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವುದು ಯಾಕೆ ಮುಖ್ಯ ಎಂಬುದರ ಸ್ಪಷ್ಟ ಚಿತ್ರಣ ನಿಮಗೀಗ ಆಗಿರಬಹುದು. ಇದನ್ನು ಹೇಗೆ ಮಾಡಬಹುದು? ರೋಗ ತಡೆಯಿಂದ ಇದು ಸಾಧ್ಯ. ಪ್ರಸ್ತುತ ಸನ್ನಿವೇಶದಲ್ಲಿ ಕ್ಯಾನ್ಸರ್‌ ತಡೆ ಅನ್ನುವುದು ಅದರ ಪ್ರಾಥಮಿಕ ಹಂತದಲ್ಲಿ ಅಥವಾ ಆದಿಸ್ವರೂಪದಲ್ಲಿ ಸಾಧ್ಯ.

Advertisement

ಆದಿಸ್ವರೂಪದಲ್ಲಿ ತಡೆ ಎಂದರೆ ಕ್ಯಾನ್ಸರ್‌ ಉಂಟಾಗುವುದಕ್ಕೆ ಮುನ್ನ ಪ್ರತಿಬಂಧನೆ. ಧೂಮಪಾನ ತ್ಯಜಿಸುವುದು ಮತ್ತು ಹೆಪಟೈಟಿಸ್‌ ಲಸಿಕೆ ಹಾಕಿಸಿಕೊಳ್ಳುವುದು ಇತ್ಯಾದಿ ಕ್ರಮಗಳಿಂದ ಕ್ಯಾನ್ಸರ್‌ ಉಂಟಾಗುವುದನ್ನು ತಡೆಯಬಹುದು. ಇದಕ್ಕೆ ಪ್ರೋತ್ಸಾಹ ಮತ್ತು ತಿಳಿವಳಿಕೆ ಅಗತ್ಯವಾಗಿದೆ.

ಪ್ರಾಥಮಿಕ ಹಂತದಲ್ಲಿ ತಡೆಯು ಸಾಮಾನ್ಯವಾಗಿ ಕ್ಯಾನ್ಸರ್‌ಗಳನ್ನು ಅವುಗಳ ಮೊದಲ ಹಂತದಲ್ಲಿಯೇ ಪತ್ತೆಹಚ್ಚುವ ಗುರಿಯನ್ನು ಹೊಂದಿರುತ್ತದೆ. ತುಂಬ ಸುಲಭವಾದ ಮತ್ತು ಎಲ್ಲರಿಗೂ ತಿಳಿದಿರುವ ಉದಾಹರಣೆ ಎಂದರೆ ಸ್ತನಗಳ ತಪಾಸಣೆ, ಮ್ಯಾಮೊಗ್ರಾಮ್‌. ಮ್ಯಾಮೊಗ್ರಾಮ್‌ಗಳ ಮೂಲಕ ಸ್ತನದ ಕ್ಯಾನ್ಸರನ್ನು ಗಡ್ಡೆಯು 1 ಸೆಂ.ಮೀ.ಗೂ ಸಣ್ಣದಾಗಿರುವಷ್ಟು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಬಹುದಾಗಿದೆ.

ಈಗ ನಾವು ಪ್ರತೀ ವರ್ಗದಲ್ಲಿಯೂ ಕೆಲವು ಉದಾಹರಣೆಗಳನ್ನು ಪಟ್ಟಿ ಮಾಡೋಣ.
ಆದ್ವಿಸ್ವರೂಪದಲ್ಲಿಯೇ ತಡೆ
– ಧೂಮಪಾನ ಮತ್ತು ಮದ್ಯಪಾನಗಳನ್ನು ತ್ಯಜಿಸುವುದು
– ಲಸಿಕೆ ಹಾಕಿಸಿಕೊಳ್ಳುವುದು: ಹೆಪಟೈಟಿಸ್‌ ಬಿ ಮತ್ತು ಎಚ್‌ಪಿವಿ
– ಆಹಾರ ಶೈಲಿ ಬದಲಾವಣೆ, ವ್ಯಾಯಾಮ, ತೂಕ ನಿಯಂತ್ರಣ

ಪ್ರಾಥಮಿಕ ಹಂತದಲ್ಲಿ ತಡೆ
– ಸ್ತನಗಳು: ಮ್ಯಾಮೊಗ್ರಾಮ್‌ ತಪಾಸಣೆ
– ಕರುಳು: ಕೊಲೊನೊಸ್ಕೋಪಿಯ ಮೂಲಕ ತಪಾಸಣೆ
– ಶ್ವಾಸಕೋಶಗಳು: ಕಡಿಮೆ ಡೋಸ್‌ನ ಸಿಟಿ ಸ್ಕ್ಯಾನಿಂಗ್‌
– ಗರ್ಭಕಂಠ: ಪ್ಯಾಪ್‌ ಸ್ಮಿಯರ್‌ ಪರೀಕ್ಷೆ
– ಬಾಯಿಯ ಒಳಭಾಗ: ತಂಬಾಕು ಬಳಕೆದಾರರಲ್ಲಿ ತಪಾಸಣೆ

ತಮ್ಮನ್ನು ಬಾಧಿಸಬಹುದಾದ ವಿವಿಧ ರೋಗಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಇರಬೇಕು. ರೋಗಗಳ ಬಗ್ಗೆ ಮಾಹಿತಿ, ಜ್ಞಾನ ಹೊಂದುವ ಮೂಲಕ ವಿವೇಕಯುತವಾಗಿ ಆಲೋಚಿಸಲು ಮತ್ತು ಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ಎದುರಾಗಬಹುದಾದ ಸಾಮಾನ್ಯ ಸವಾಲುಗಳನ್ನು ಎದುರಿಸಿ ಗೆಲ್ಲಲು ಜ್ಞಾನವೇ ಶಕ್ತಿಯುತವಾದ ಸಾಧನ; ಕ್ಯಾನ್ಸರ್‌ ವಿಷಯವಾಗಿಯೂ ಇದು ನಿಜ. ತಿಳಿವಳಿಕೆ ಮತ್ತು ಶೀಘ್ರ ತಪಾಸಣೆಗಳಿಂದ ಸಾಕಷ್ಟು ಜೀವಗಳನ್ನು ರಕ್ಷಿಸಬಹುದು; ಸಮಾಜದ ಮೇಲೆ ಉತ್ತಮ ಆರ್ಥಿಕ ಪರಿಣಾಮವನ್ನು ಸಾಧಿಸಬಹುದಾಗಿದೆ.

ಡಾ| ಕಾರ್ತಿಕ್‌ ಕೆ.ಎಸ್‌., ಸರ್ಜಿಕಲ್‌ ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next