ಬೀಳಗಿ: ಸಂವಿಧಾನದ ಪ್ರಮುಖ ಅಂಗಗಳಲ್ಲಿ ಆಡಳಿತ ಯಂತ್ರ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ಅಧಿಕಾರಿಗಳು ಒಂದೇ ಕುಟುಂಬದವರಂತೆ ಕೆಲಸ ಮಾಡುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಬೇಕು. ಅಭಿವೃದ್ಧಿಗೆ
ಅಧಿಕಾರಿಗಳೇ ಆಧಾರ ಸ್ಥಂಭವಾಗಿದ್ದಾರೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ತಾಪಂ ಸಭಾ ಭವನದಲ್ಲಿ ಬುಧವಾರ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ರೈತರು, ನೇಕಾರರು, ಮೀನುಗಾರರು, ಕೃಷಿ ಕೂಲಿ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳನ್ನುತಲುಪಿಸುವ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲ ಅಧಿಕಾರಿ ವರ್ಗ ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ನಾನು ಯಾವುದೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಲಾರೆ. ವರ್ಗಾವಣೆಗೆ ಕೈ ಹಾಕಲಾರೆ ಎಂದರು.
ಕಾನೂನು ಚೌಕಟ್ಟಿನ ಜತೆಗೆ ಕೆಲವೊಂದು ಬಾರಿ ಮಾನವೀಯತೆಯ ಆಧಾರದ ಮೇಲೆ ಜನತೆಗೆ ಅಧಿ ಕಾರಿಗಳು ಸ್ಪಂದಿಸಬೇಕಾಗುತ್ತದೆ. ಕಾರಣ, ಅಧಿಕಾರಿಗಳು ಜನಸಾಮಾನ್ಯರ ಜತೆಗೆ ತಾಳ್ಮೆಯಿಂದ ವ್ಯವಹರಿಸುವ ಕೆಲಸ ಮಾಡಬೇಕು. ಮತಕ್ಷೇತ್ರದ ಹಲವಾರು ಇಲಾಖೆಗಳ ಕುರಿತು ಈ ಸಂದರ್ಭ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕೆಲ ಇಲಾಖೆಗಳ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಕುರಿತಾಗಿಯೇ ಸ್ಪಷ್ಟ ಮಾಹಿತಿ ಇರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಪೂರ್ಣಗೊಂಡಿದೆ. ಇನ್ನಷ್ಟು ಸಣ್ಣ-ಪುಟ್ಟ ಕೆಲಸಗಳ ಜತೆಗೆ ಹಳೆಯ ಕಾಲೇಜಿನಲ್ಲಿನ ವಿದ್ಯಾರ್ಥಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಹದಿನೈದು ದಿನದಲ್ಲಿ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಎಇಇ ಎಂ.ಟಿ.ಮೇಟಿ ಅವರಿಗೆ ಸೂಚಿಸಿದರು. ಶಿಕ್ಷಣ, ಆರೋಗ್ಯ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸ್ಥಿಗತಿಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಬೀಳಗಿ ತಾಪಂ ಇಒ ಎಂ.ಕೆ.ತೊದಲಬಾಗಿ, ಬಾದಾಮಿ ತಾಪಂ ಇಒ ಭೀಮಪ್ಪ ಲಾಳಿ, ಬಾಗಲಕೋಟೆ ತಾಪಂ ಇಒ ರವಿ ಬಂಗಾರೆಪ್ಪನವರ, ಜಿಪಂ ಎಇಇ ಮಹೇಶಕಕರಡ್ಡಿ ಭಾಗವಹಿಸಿದ್ದರು.