ಕಾಶ್ಮೀರ : ”ಶ್ರೀನಗರದ ಕರಣ್ ನಗರದಲ್ಲಿನ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಲಷ್ಕರ ಎ ತಯ್ಯಬ ಉಗ್ರರು ದಾಳಿಗೆ ಯತ್ನಿಸಿದ್ದರು. ಅವರನ್ನು 24 ತಾಸುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ” ಎಂದು ಕಾಶ್ಮೀರ ಐಜಿಪಿ ಎಸ್ ಪಿ ಪಾಣಿ ಅವರು ಶ್ರೀನಗರದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಓರ್ವ ಸಿಆರ್‌ಪಿಎಫ್ ಜವಾನ ಗಾಯಗೊಂಡಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪಾಣಿ ತಿಳಿಸಿದರು.
ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಲಷ್ಕರ್ ಉಗ್ರರ ದಾಳಿ ಯತ್ನ ನಿನ್ನೆ ಸೋಮವಾರ ಆರಂಭಗೊಂಡಿತ್ತು. ಒಂದು ದಿನ ಪೂರ್ತಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿತ್ತು. ಕರಣ್ ನಗರ ಪ್ರದೇಶದಲ್ಲಿನ ನಿರ್ಮಾಣ ಹಂತದಲ್ಲಿದ್ದ ಕಟ್ಟಡದೊಳಗೆ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಬೆನ್ನಟ್ಟಿ ಗುಂಡಿಟ್ಟು ಸಾಯಿಸಲಾಯಿತು ಎಂದು ಪಾಣಿ ತಿಳಿಸಿದರು.
ಈ ಮೊದಲು ಸಂಜ್ವಾನಾ ಮತ್ತು ಕರಣ್ ನಗರ ಸಿಆರ್‌ಪಿಎಫ್ ಶಿಬಿರದ ಮೇಲಿನ ಉಗ್ರ ದಾಳಿ ತನ್ನದೇ ಕೃತ್ಯ ಎಂದು ಜೈಶ್ ಎ ಮೊಹಮ್ಮದ್ ಹೇಳಿಕೊಂಡಿತ್ತು.
ಕಳೆದ ಶನಿವಾರ ಸಂಜ್ವಾನಾ ಸೇನಾ ಶಿಬಿರದ ಮೇಲೆ ನಡೆದಿದ್ದ ದಾಳಿಯು ಉರಿ ಸೇನಾ ಶಿಬಿರದ ಮೇಲೆ ನಡೆದಿದ್ದ ದಾಳಿಯ ಬಳಿಕದ ಅತ್ಯಂತ ಘೋರ ಉಗ್ರ ದಾಳಿ ಎನಿಸಿದೆ.