ಹಾವೇರಿ: ಸ್ವಚ್ಛತೆ ಮತ್ತು ನೈರ್ಮಲ್ಯ ಇಂದಿನ ತುರ್ತು ಅಗತ್ಯ. ಸ್ವಚ್ಛತೆ ಕುರಿತು ಶಿಕ್ಷಕರು ಇಂದು ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳಲ್ಲಿ ಸ್ವಚ್ಛತೆ ಅರಿವು ಮೂಡಿಸಬೇಕು ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹೇಳಿದರು.
ಜಿಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ಮೇವ ಜಯತೆ ಆಂದೋಲನ ಅಂಗವಾಗಿ ಗ್ರಾಪಂಗಳಲ್ಲಿ ಮತ್ತು ಶಾಲೆಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಗ್ರಾಮೀಣ ಸಮುದಾಯಕ್ಕೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ್ದ ಒಂದು ದಿನದ ಘನ ತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕೆ ಹಿರಿಯರು ಶ್ರಮಿಸಿದಂತೆ, ದೇಶದ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವುದು ಅಗತ್ಯ. ಗ್ರಾಮಗಳ ಸ್ವಚ್ಛತೆಗೆ ವಿದ್ಯಾರ್ಥಿಗಳು, ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಮಹಾತ್ಮ ಗಾಂಧಿಧೀಜಿಯವರು ರಸ್ತೆಗಳ ಕಸ ಗೂಡಿಸಿದರು ಹಾಗೂ ಶೌಚಾಲಯ ಶುಚಿಗೊಳಿಸುವ ಮೂಲಕ ಸ್ವಚ್ಛ ಭಾರತದ ಕನಸು ಕಂಡಿದ್ದರು. ಗಾಂಧಿಧೀಜಿಯವರ ಮಾದರಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮುಂದುವರಿಯಬೇಕು. ಆರೋಗ್ಯವಂತ ಸಮಾಜದಿಂದ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ವಾರಕ್ಕೆ ಒಂದು ದಿನವಾದರೂ ವಿದ್ಯಾರ್ಥಿಗಳ ತಂಡದೊಂದಿಗೆ ಗ್ರಾಮದೊಳಗೆ ಸಂಚರಿಸಿ ಗ್ರಾಮಸ್ಥರಿಗೆ ಸ್ವಚ್ಛತೆಯ ಜಾಗೃತಿ, ಮಿತ ನೀರು ಬಳಕೆ, ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಕೆ.ಲೀಲಾವತಿ ಪ್ರಾಸ್ತಾವಿಕ ಮಾತನಾಡಿ, ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಪ್ಲಾಸ್ಟಿಕ್ ಬಳಕೆ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಹಳ್ಳಿಗಳಲ್ಲೂ ಪ್ಲಾಸ್ಟಿಕ್ ಬಳಕೆ ಅಧಿಕವಾಗಿದೆ. ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದೆ. ನಗರದಂತೆ ಹಳ್ಳಿಗಳಲ್ಲೂ ಒಣ ಹಾಗೂ ಹಸಿ ಕಸ ವಿಂಗಡಣೆ, ಸ್ವಚ್ಛತೆ ಹಾಗೂ ಶೌಚಾಲಯ ಬಳಕೆ ಪ್ರತಿ ಕುಟುಂಬ ಅವಿಭಾಜ್ಯ ಅಂಗ ಎಂಬುದರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಮೂಲಕ ಸಂದೇಶ ತಲುಪಿಸಲು ಶಿಕ್ಷಕರಿಗೆ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಕೆ. ಲೀಲಾವತಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.