ಪ್ರತಿ ವರ್ಷ ಕರ್ನಾಟಕಕ್ಕೆ ತಮಿಳುನಾಡಿನಿಂದ ಕಾವೇರಿ ನೀರಿನ ತಕರಾರು ತಪ್ಪಿದ್ದಲ್ಲ. ರಾಜ್ಯದಲ್ಲಿ ಭರ್ಜರಿ ಮಳೆಯಾಗಲಿ ಇಲ್ಲವೇ ತೀವ್ರ ಬರಗಾಲವಿರಲಿ, ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿರಲಿ, ಖಾಲಿಯಾಗಿರಲಿ, ಅರ್ದಂಬರ್ಧ ತುಂಬಿರಲಿ ನೆರೆ ರಾಜ್ಯಕ್ಕೆ ಮಾತ್ರ ಸದಾ ನೀರಿನ ದಾಹ ಇದ್ದೇ ಇರುತ್ತದೆ. ಮೆಟ್ಟೂರು ಜಲಾಶಯ ತನ್ನ ನೀರಾವರಿ ಅಗತ್ಯತೆಗಳು (ಕುರುವೈ ಬೆಳೆಗೆ) ಹಾಗೂ ಕುಡಿಯುವ ನೀರು ಪೂರೈಸಿಕೊಳ್ಳುವಷ್ಟು ನೀರನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದರೂ ಅಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ತನ್ನ ಪಾಲಿನ ನೀರನ್ನು (ಮಾಸಿಕ ಕೋಟಾ) ಬಿಡುಗಡೆ ಮಾಡಲೇಬೇಕೆಂದು ಹಠ ಸಾಧಿಸುವುದು ನೆರೆ ರಾಜ್ಯದ ಸರ್ಕಾರಗಳ ಧೋರಣೆಯಾಗಿದೆ. ಇದು ಕರ್ನಾಟಕ ಸರ್ಕಾರಕ್ಕೆ ಪ್ರತಿ ವರ್ಷ ಒಂದು ರೀತಿ ತಮಿಳುನಾಡಿನಿಂದ “ವಾರ್ಷಿಕ ಕಾವೇರಿ ಕಿರುಕುಳ’ ಇದ್ದಂತೆ ಆಗಿದೆ.
ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಮುಂಗಾರು ಕೈಕೊಟ್ಟು ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದರೂ ತಮಿಳುನಾಡು ಸರ್ಕಾರ ಮಾತ್ರ ತನ್ನ ಕೋಟಾದ ನೀರು ಬಿಡುಗಡೆಗೆ ಪಟ್ಟು ಹಿಡಿದು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ರಾಜ್ಯದಲ್ಲಿ ಸಮೃದ್ಧಿ ಮಳೆಗಾಲ ಅನ್ನುವಂತೆಯೂ ಇಲ್ಲ ಅಥವಾ ಬರಗಾಲವೆಂದು ಹೇಳುವಂತೆಯೂ ಇಲ್ಲ. ಹೀಗೆ ಈ ವರ್ಷ ಮಳೆರಾಯ ನಾಡಿನ ರೈತರನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ್ದಾನೆ, ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲೇ ಕುಡಿಯುವ ನೀರಿಗೂ ಹಾಹಾಕಾರವಿದೆ.
ಬೆಳೆಗಳು ನೀರಿನ ಕೊರತೆ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರವು ಕರ್ನಾಟಕದ ಮಳೆ-ಬೆಳೆ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳದೇ ಕೇವಲ ಡ್ಯಾಂಗಳು ತುಂಬಿವೆ, ನೀರಿದೆ ಎಂಬ ಕಾರಣಕ್ಕೆ ನೀರು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿರುವುದು ಸರಿಯಲ್ಲ. ಜಲಾನಯನ ಪ್ರದೇಶದಲ್ಲಿ ರೈತರು ಬತ್ತ ನಾಟಿ ಸೇರಿದಂತೆ ಹಲವು ಬೆಳೆಗಳಿಗೆ ನೀರು ಪೂರೈಸಲು ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಆದರೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಾದ ಕಾನೂನಾತ್ಮಕ ಅನಿವಾರ್ಯತೆ ಸೃಷ್ಟಿಯಾಗಿದೆ.
ಕರ್ನಾಟಕ ಸರ್ಕಾರವು ಆಗಸ್ಟ್ 14ರವರೆಗೆ 37.971 ಟಿಎಂಸಿ ಅಡಿ ಕಡಿಮೆ ನೀರು ಬಿಟ್ಟಿದೆ. ಬಾಕಿ ನೀರು ಬಿಡುಗಡೆ ಮಾಡುವುದರ ಜತೆಗೆ ಆಗಸ್ಟ್‌ನಲ್ಲಿ ನಿತ್ಯ ಹೆಚ್ಚುವರಿಯಾಗಿ 24 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದೆ. ಜೂನ್ 1 ರಿಂದ ಜುಲೈ 31ರವರೆಗಿನ ನೀರಾವರಿ ವರ್ಷದಲ್ಲಿ 28.849 ಟಿಎಂಸಿ ಅಡಿ ಕಡಿಮೆ ನೀರು ಬಿಟ್ಟಿದೆ ಎಂಬುದು ತಮಿಳುನಾಡಿನ ಆರೋಪ. 2018 ರಲ್ಲಿ ಸುಪ್ರೀಂಕೋರ್ಟ್ ಮಾರ್ಪಾಡಿಸಿದ ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ಸೆಪ್ಟೆಂಬರ್‌ನಲ್ಲಿ 36.76 ಟಿಎಂಸಿ ನೀರು ಬಿಡಬೇಕಿದೆ. ಆದರೆ ಜುಲೈನ ಮಧ್ಯಭಾಗದಲ್ಲಿ ಸುರಿದ ಮಳೆರಾಯ ದಿಢೀರನೆ ಕಣ್ಮರೆಯಾಗಿದ್ದಾನೆ. ಕರ್ನಾಟಕದಲ್ಲಿ ಈಗ ಎಲ್ಲೆಲ್ಲೂ ಮಳೆ ಬೀಳುತ್ತಿಲ್ಲ, ಮಳೆಗಾಲದಲ್ಲೂ ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ಬರದ ಛಾಯೆ ಆವರಿಸಿದೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ತನ್ನ ನಾಡಿನ ರೈತರ ಹಿತ ಹಾಗೂ ಕುಡಿಯುವ ನೀರು ಪೂರೈಕೆಗೆ ನೀರು ಕಾಪಾಡಿಕೊಳ್ಳುವ ಇಕ್ಕಟ್ಟಿನಲ್ಲಿ ಸಿಲುಕಿದೆ.
ಮೆಟ್ಟೂರು ಡ್ಯಾಂನಲ್ಲಿ ಜೂನ್ 1 ರಂದು 69.77 ಟಿಎಂಸಿ, ಭವಾನಿ ಸಾಗರ ಡ್ಯಾಂನಲ್ಲಿ 16.653 ಟಿಎಂಸಿ ನೀರು ಲಭ್ಯವಿತ್ತು. ಬಿಳಿಗುಂಡ್ಲು ಮಾಪನ ಕೇಂದ್ರದಿಂದ ಈ ತಿಂಗಳ 6ಕ್ಕೆ 14.054 ಟಿಎಂಸಿ ನೀರು ಹರಿದು ಹೋಗಿದೆ ಎಂಬ ವರದಿಗಳಿವೆ. ಸದ್ಯ ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಈ ವರ್ಷ 83.831ಟಿಎಂಸಿ ನೀರು ಲಭ್ಯವಿದೆ. ಸಿಡಬ್ಲೂಡಿಟಿ ಪ್ರಕಾರ ತಮಿಳುನಾಡು ರಾಜ್ಯ ಕುರುವೈ ಬೆಳೆಗೆ 1.80 ಲಕ್ಷ ಎಕರೆ ಹಾಗೂ 32 ಟಿಎಂಸಿ ನೀರು ಬಳಸಬೇಕು. ಆದರೆ, ತಮಿಳುನಾಡು ಕುರುಬೈ ಬೆಳೆಗೆ ನಿಗದಿತಕ್ಕಿಂತ ದುಪ್ಪಟ್ಟು ನೀರು ಬಳಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಲೆಕ್ಕಿಸದೇ ಸಿಡಬ್ಲೂಡಿಟಿ ಆದೇಶ ಉಲ್ಲಂ ಸಿ ನಾಲ್ಕು ಪಟುx ನೀರು ಬಳಸಿದೆ. ಈಗ ನೀರು ಇಲ್ಲ, ನೀರು ಬಿಡುಗಡೆ ಮಾಡಿ ಎಂಬ ಕ್ಯಾತೆ ತೆಗೆದಿದೆ. ಅಲ್ಲಿನ ಯಾವುದೇ ಸರ್ಕಾರಗಳಿಗೂ ಮಾನವೀಯತೆ ಎಂಬುದೇ ಇಲ್ಲ. ನೀರಿನ ದಾಹ ಹಾಗೂ ದುರಾಸೆ ಸದಾ ಎದ್ದುಕಾಣುತ್ತಿದೆ. ರಾಜ್ಯದ ಮಳೆ ಸ್ಥಿತಿಯನ್ನು ಅರಿತುಕೊಂಡು ಸಂಕಷ್ಟದ ಸೂತ್ರ ಪಾಲಿಸಲು ಮುಂದಾಗಬಹುದಿತ್ತು. ಆದರೆ ಅಲ್ಲಿನ ಪ್ರತಿಪಕ್ಷಗಳು ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳಬಹುದೆಂದು ತನ್ನ ಹಕ್ಕು ಪ್ರತಿಪಾದಿಸಲು ಸುಪ್ರೀಂಮೊರೆ ಹೋಗಿರುವುದು ಸರಿಯಲ್ಲ.
ಉಭಯ ರಾಜ್ಯಗಳು ನೀರಿನ ಕೊರತೆ ನೀಗಿಸಿಕೊಳ್ಳುವ ಸಲುವಾಗಿಯೇ ಕರ್ನಾಟಕ ಸರ್ಕಾರ ಮೇಕೆದಾಟು ನೀರಿನ ಯೋಜನೆ ರೂಪಿಸಿದ್ದು ಅದಕ್ಕೂ ತಮಿಳುನಾಡು ತಕರಾರು ತೆಗೆದಿದೆ. ಡ್ಯಾಂಗಳು ಭರ್ತಿಯಾದ ಬಳಿಕ ಹೆಚ್ಚುವರಿ ನೀರು ಸಮುದ್ರ ಪಾಲಾಗುವುದನ್ನು ತಪ್ಪಿಸಲು ಮೇಕೆದಾಟು ಬಳಿ ಡ್ಯಾಂ ನಿರ್ಮಿಸಿ ಉಭಯ ರಾಜ್ಯಗಳು ಅದನ್ನು ಬಳಸಿಕೊಳ್ಳಬಹುದಾಗಿದೆ. ಇದನ್ನು ದೀರ್ಘಕಾಲಿಕ ಪರಿಹಾರವೆಂದು ಪರಿಗಣಿಸಿ ತಮಿಳುನಾಡು ಸರ್ಕಾರ “ಕೊಡು-ತೆಗೆದುಕೊಳ್ಳುವ ನೀತಿ’ ಗೆ ಮುಂದೆ ಬರಬೇಕೇ ಹೊರತು ಕೇವಲ ತಾತ್ಕಾಲಿಕ ಪರಿಹಾರಗಳಿಗೆ ಯೋಚಿಸುವುದು ಸರಿಯಲ್ಲ.