Advertisement

ಸ್ವಾಮೀಜಿಯವರು ಧರ್ಮದ ಭೋಧನೆ ಮಾಡಲಿ, ಬೆದರಿಕೆ ಹಾಕುವುದು ಸರಿಯಲ್ಲ: ಶಾಸಕ ಯತ್ನಾಳ

09:12 AM Jan 16, 2020 | Mithun PG |

ವಿಜಯಪುರ: ಹರಿಹರದಲ್ಲಿ ನಡೆದ ಹರ ಜಾತ್ರೆ ಕಾರ್ಯಕ್ರಮದ ವೇದಿಕೆಯಲ್ಲಿ ಪಂಚಮಸಾಲಿ ಪೀಠದ‌ ವಚನಾನಂದ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಎಚ್ಚರಿಕೆ ನೀಡುವ ಧಾಟಿಯಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಡುಕಿದ್ದಾರೆ‌.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಂದರೆ ದೊರೆ ಇದ್ದಂತೆ, ಸ್ವಾಮೀಜಿಗಳು ಇತರರು ಸೇರಿದಂತೆ ಯಾರೂ ಗೊಡ್ಡು ಬೆದರಿಕೆಗಳನ್ನು ಹಾಕುವುದು ಸರಿಯಲ್ಲ. ಸ್ವಾಮೀಜಿಗಳು ಎಂದ ಮಾತ್ರಕ್ಕೆ ಏನು ಬೇಕಾದ್ದು ಮಾತಾಡಲು ಪರಮಾಧಿಕಾರ ನೀಡಿಲ್ಲ. ಮಠಾಧೀಶರು ಕೂಡ ಗೌರವಯುತ ವರ್ತನೆ ತೋರಬೇಕು. ಸ್ವಾಮಿಗಳ ಈ ನಡೆಯಿಂದ ಪಂಚಮಸಾಲಿ ಸಮುದಾಯಕ್ಕೂ ಅವಮಾನ ಆಗಿದೆ. ನಿಮ್ಮದೇ ಕಾರ್ಯಕ್ರಮಕ್ಕೆ ಕರೆಸಿ, ನಿರಾಣಿಯನ್ನು ಮಂತ್ರಿ ಮಾಡಬೇಕು, ಇಲ್ಲದಿದ್ದರೆ ಪಂಚಮಸಾಲಿ ಸಮಾಜ ನಿಮ್ಮೊಂದಿಗೆ ಇರುವುದಿಲ್ಲ ಎಂದು ಬೆದರಿಕೆ ಹಾಕುವುದು ಉತ್ತಮ ಸಂಸ್ಕೃತಿಯಲ್ಲ. ಇವರ ವರ್ತನೆ ಮುಂದುವರೆದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.

ಮುರುಗೇಶ ನಿರಾಣಿ ಅವರನ್ನು ಬಿಜೆಪಿಗೆ ಕರೆತಂದದ್ದೇ ನಾನು ಹಾಗೂ ಶ್ರೀಕಾಂತ ಕುಲಕರ್ಣಿ. ಹಿಂದಿನ ಸರಕಾರದಲ್ಲಿ ತಮ್ಮನ್ನು ಬೃಹತ್ ಕೈಗಾರಿಕಾ ಮಂತ್ರಿ ಮಾಡಿದ್ದೇ ಯಡಿಯೂರಪ್ಪ ಎಂಬುದ್ದು ನಿರಾಣಿ ನೆನಪಲ್ಲಿ ಇರಿಸಿಕೊಳ್ಳಬೇಕು.

ನಿರಾಣಿ ಅವರು ಪಂಚಮಸಾಲಿಯ ಎರಡು ಪೀಠಗಳಲ್ಲಿ ಯಾವುದು ಹೆಚ್ಚು  ಕ್ರಿಯಾಶೀಲವಾಗಿರುತ್ತದೋ ಅದನ್ನು ಮಾತ್ರ ನಿರ್ವಹಿಸುತ್ತಾರೆ. ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ನಿರಾಣಿ ಸಹೋದರರೇ ಆಡಳಿತ ನಡೆಸುತ್ತಿದ್ದಾರೆ, ಇವರ ಮಾತು ಕೇಳಿಕೊಂಡು ಮಠಾಧೀಶರಾದವರು ಮನಬಂದಂತೆ ಮಾತನಾಡಬಾರದು ಎಂದು ಸಲಹೆ ನೀಡಿದರು.
ಎಲ್ಲ ಅಧಿಕಾರಗಳು ನಿರಾಣಿ ಅವರ ಕುಟುಂಬಕ್ಕೆ  ಬೇಕಾದರೇ ಪಂಚಮಸಾಲಿ ಸಮಾಜದ ಇತರೆ ಶಾಸಕರೇನು ದನಕಾಯಲು ಇದ್ದೇವೆಯೇ ?  ಎಂಎಲ್‌ಎ, ಎಂ‌ಎಲ್ ಸಿ , ಡಿಸಿಎಂ, ರಾಜ್ಯಸಭಾ ಎಲ್ಲಾ ಅವರ ಮನೆಯಲ್ಲಿನ‌ ಬೆಕ್ಕು, ನಾಯಿಗೆ ಬೇಕು ಎಂದು ವಾಗ್ದಾಳಿ ನಡೆಸಿದರು.

ನಿರಾಣಿ ಅವರು ಯಡಿಯೂರಪ್ಪ ಅವರ ಕೃಪೆಯಿಂದ ಈ ಹಿಂದೆ ಐದು ವರ್ಷ ಕೈಗಾರಿಕಾ ಮಂತ್ರಿ ಮಾಡಿದ್ದಾಗ, ನಾಲ್ಕೈದು ಸಕ್ಕರೆ ಕಾರ್ಖಾನೆ ಮಾಡಿಕೊಂಡರು. ಇಂಥ ಕೆಲಸ ಮಾಡಿಕೊಳ್ಳಲು ಮಂತ್ರಿಸ್ಥಾನ ಬೇಕೆ ಎಂದು ಎಂದು ಪ್ರಶ್ನಿಸಿದರು.

Advertisement

ಈಗ ಮಾತನಾಡುವ ಸ್ವಾಮೀಜಿ ಪ್ರವಾಹ ಬಂದಾಗ ಎಲ್ಲಿದ್ದರು. ಆಗ ಏಕೆ ಮಾತನಾಡಲಿಲ್ಲ ?  ಸ್ವಾಮೀಜಿಯಾಗಿ ಧರ್ಮದ ಭೋದನೆ ಮಾಡಲಿ, ಯಾವುದೋ ಒಬ್ಬ ಶಾಸಕನನ್ನು ಮಂತ್ರಿ‌ ಮಾಡುವ ಸಲುವಾಗಿ‌ ಸಮಾಜದ ಸ್ವಾಮಿಗಳಾದವರು ಹೀಗೆ ಮಾತಾಡಬಾರದು  ಎಂದು ಕಿಡಿಕಾರಿದರು.

ಸ್ವಾಮೀಜಿಗಳ ಮರ್ಜಿಯಿಂದ ಮಂತ್ರಿಯಾದರೇ ನಿತ್ಯ ಬೆಳಗಾದರೆ ಅವರ ಮಠದ ಮುಂದೆ ಹೋಗಿ ಕೂರಬೇಕಾಗುತ್ತದೆ. ಅದಕ್ಕೆ ನಾನು ಯಾವ ಸ್ವಾಮೀಜಿ ಬಳಿ ಮಂತ್ರಿ ಸ್ಥಾನ ಕೊಡಿಸಿ ಎಂದು ಹೋಗಿಲ್ಲ ಎಂದರು.

ನನಗೆ ಅರ್ಹತೆ ಇದ್ದರೆ ಮಂತ್ರಿ ಮಾಡಿಮ ಇಲ್ಲದಿದ್ರೆ ಬೇಡ. ನನ್ನ ಅರ್ಹತೆ ಏನು‌ ಎಂಬುದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೊತ್ತಿತ್ತು, ಕೇಂದ್ರದಲ್ಲಿ ಅವರೇ ನೇರವಾಗಿ ನನ್ನನ್ನು ಮಂತ್ರಿ ಮಾಡಿದರು. ಮತ್ತೊಂದೆಡೆ ವಿಜಯಪುರ ಜಿಲ್ಲೆ ಜನರಿಗೆ ನನ್ನ ಅರ್ಹತೆ ಗೊತ್ತಿದೆ ಎಂದರು.

ನಾನು ಸಚಿವ ಸ್ಥಾನ ಸೇರಿದಂತೆ‌ ಏನನ್ನೂ ಬೇಡುವುದಿಲ್ಲ‌. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯದಷ್ಟು ಹಣ ಕೊಡಿ ಸಾಕು ಎಂದು ಸಿ.ಎಂ. ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ. ಹೀಗಾಗಿ ನಾನು ಸಚಿವ ಸ್ಥಾನ ಬಿಡುವುದಿಲ್ಲ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಶ್ರಮಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next