Advertisement

ಸಾಮಾಜಿಕ ಸೇವೆ ನಮ್ಮೆಲ್ಲರ ಧ್ಯೇಯವಾಗಲಿ

10:12 AM Mar 18, 2020 | mahesh |

ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಮತ್ಯಾವುದರಲ್ಲೂ ಇಲ್ಲ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಈ ಮಾತು ಸತ್ಯ. ಈ ನಿಟ್ಟಿನಲ್ಲಿ ಅರಿವು ಮೂಡಿಸುವುದಕ್ಕಾಗಿ ಜಗತ್ತಿನಾದ್ಯಂತ ವಿಶ್ವ ಸಾಮಾಜಿಕ ಕಾರ್ಯ ದಿನವನ್ನು ಮಾ.17ರಂದು ಆಚರಿಸಲಾಗುತ್ತದೆ. ಕೊರೊನಾದಿಂದ ಆತಂಕಗೊಂಡಿರುವ ಜಗತ್ತಿಗೆ ಜಾಗೃತಿ ಮೂಡಿಸಿ, ಆತಂಕವನ್ನು ದೂರ ಮಾಡುವ ಸಾಮಾಜಿಕ ಸೇವಾ ಕಾರ್ಯಕರ್ತರು ಇಂದಿನ ಅಗತ್ಯವಾಗಿದ್ದು, ಇದಕ್ಕಾಗಿ ಈ ದಿನಾಚರಣೆ ತುಂಬಾ ಪ್ರಸ್ತುತ ಎನಿಸುತ್ತದೆ.

Advertisement

“ನನಗಲ್ಲ, ನಮಗೆ’ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ನಾವು ಕೇಳಿ ರುತ್ತೇವೆ. ನಾವು “ನನಗಾಗಿ’ ಬದುಕುವುದಕ್ಕಿಂತ “ನಮಗಾಗಿ’ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ಹಿನ್ನೆಲೆ ನಮಗೆ ಸಾಮಾಜಿಕ ತುಡಿತ ಇರುವುದು ಅಗತ್ಯ. ಯುವ ಸಮಾಜಕ್ಕೆ ಸಮಾಜದ ಮೇಲಿನ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಲು ಪ್ರೋತ್ಸಾಹ ನೀಡುವುದಕ್ಕಾಗಿಯೇ ವಿಶ್ವ ಸಾಮಾಜಿಕ ಕಾರ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಸಾಮಾಜಿಕ ಕಾರ್ಯಕರ್ತರ ಕಾರ್ಯವನ್ನು ನೆನೆಯಲಾಗುತ್ತದೆ.

ಕಾಳಜಿಯ ದಿನ
ವಿಶ್ವ ಸಾಮಾಜಿಕ ಕಾರ್ಯ ದಿನವನ್ನು ಮಾರ್ಚ್‌ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಗುತ್ತದೆ. 1983ರಲ್ಲಿ ಅಂತಾರಾಷ್ಟ್ರೀಯ ಫೆಡರೇಶನ್‌ ಆಫ್ ಸೋಶಿಯಲ್‌ ವರ್ಕರ್ ಎಂಬ ಸಂಘಟನೆ ಸಾಮಾಜಿಕ ಕಾರ್ಯ ದಿನವನ್ನು ಆಚರಿಸಲು ಕರೆ ನೀಡಿತು. ಅಂದಿನಿಂದ ಇದನ್ನು ವಿಶೇಷ ಸಂದೇಶದೊಂದಿಗೆ ಆಚರಿಸಲಾಗುತ್ತಿದ್ದು, ವಿವಿಧ ಸಾಮಾಜಿಕ ಸೇವಾ ಸಂಘಟನೆಗಳು, ಸರಕಾರೇತರ ಸಂಘಟನೆಗಳು (ಎನ್‌ಜಿಒ), ಸಾಮಾಜಿಕ ಕಾರ್ಯಕರ್ತರು ಈ ಆಚರಣೆಯಲ್ಲಿ ಕೈ ಜೋಡಿಸುತ್ತಿದ್ದಾರೆ.

ವಿಶೇಷ ಥೀಮ್‌
2020ರ ಸಾಮಾಜಿಕ ಸೇವಾಕಾರ್ಯ ದಿನವನ್ನು ಮಾ. 17ರಂದು ಜಗತ್ತಿನಾದ್ಯಂತ ಬಹು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಮಾನವ ಹಕ್ಕುಗಳ ರಕ್ಷಣೆಗೆ ಬೆಂಬಲ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ “ಮಾನವ ಹಕ್ಕುಗಳನ್ನು ಬೆಂಬಲಿಸಿ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಇದಲ್ಲದೆ ಸಾಮಾಜಿಕ ಸೇವೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. 2017-18ನೇ ಸಾಲಿನಲ್ಲಿ “ಸಮುದಾಯ ಮತ್ತು ಸುಸ್ಥಿರ ಪರಿಸರವನ್ನು ಪ್ರೋತ್ಸಾಹಿಸಿ’ ಎಂಬ ಸಂದೇಶದೊಂದಿಗೆ ಆಚರಿಸಲಾಗಿತ್ತು.

ಸಾಮಾಜಿಕ ಕಾರ್ಯಕರ್ತ ಎಂಬ ಬಲ
ಸಮಾಜದಲ್ಲಿ ಅನ್ಯಾಯ ಎದುರಾದಾಗ ಅದರ ವಿರುದ್ಧವಾಗಿ ಧ್ವನಿಯಾಗಿ ನ್ಯಾಯಕ್ಕಾಗಿ ಹೋರಾಡುವವರೇ ಸಾಮಾಜಿಕ ಕಾರ್ಯಕರ್ತರು. ಇದೊಂದು ವೃತ್ತಿಯಲ್ಲ. ನಿಸ್ವಾರ್ಥ ಮನೋಭಾವನೆಯಿಂದ ಸಮಾಜದ ಒಗ್ಗಟ್ಟು, ಸಾಮರಸ್ಯ ಕಾಪಾಡಲು ಇವರ ಸೇವೆ ಅನನ್ಯ.

Advertisement

ಭಾರತಕ್ಕೀಗ ಪ್ರಸ್ತುತ
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನವನ್ನು ಆಚರಿಸುತ್ತಿರುವ ಭಾರತಕ್ಕೆ ಈ ದಿನ ತುಂಬಾ ಪ್ರಸ್ತುತವಾಗಿದೆ. ನಿಸ್ವಾರ್ಥ ಸೇವಾ ಮಾನೋಭಾವನೆಯ ಅಂಶವನ್ನು ಜೀವನದಲ್ಲಿ ರೂಢಿಸಿಕೊಂಡ ಸಾಮಾಜಿಕ ಕಾರ್ಯಕರ್ತರು ದೇಶಕ್ಕೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ದಿನವೂ ಜಾಗೃತಿ ಮೂಡಿಸಲಿ. ಇನ್ನೂ ಜಾಗತಿಕವಾಗಿ ಆತಂಕ ಸೃಷ್ಟಿಸಿರುವ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಈ ದಿನದಂದು ಆಗಲಿ ಎಂಬುದು ಆಶಯ.

ಸಾಮಾಜಿಕ ಕಾರ್ಯಗಳ ಮೌಲ್ಯಗಳು
ಸೇವೆ
ಸಹಾಯದ ಆವಶ್ಯಕತೆಯಿರುವವರಿಗೆ ನೆರವಾಗುವುದೇ ಸಾಮಾಜಿಕ ಕಾರ್ಯ ಗಳ ಮೊದಲ ಉದ್ದೇಶ. ಸಾಮಾಜಿಕ ಕಾರ್ಯಕರ್ತರು ತಮ್ಮಲ್ಲಿನ ಕೌಶಲ ಮತ್ತು ಜ್ಞಾನವನ್ನು ಸಾಮಾಜಿಕ ಸಮಸ್ಯೆಗಳ ನಿವಾರಣೆಗಾಗಿ ಉಪ ಯೋಗಿಸಬೇಕಾಗುತ್ತದೆ. ಸಾಮಾ ಜಿಕ ಕಾರ್ಯಗಳಲ್ಲಿ ತೊಡಗಿ ಸಿಕೊಳ್ಳಲು ಇಚ್ಛಿಸುವವರು ಪ್ರತಿಫ‌ಲದ ನಿರೀಕ್ಷೆ ಇಲ್ಲದೇ ಸೇವೆಗೆ ಮುಂದಾಗಬೇಕಾಗುತ್ತದೆ.

ಸಾಮಾಜಿಕ ನ್ಯಾಯ
ಸಾಮಾಜಿಕ ಸೇವಾಕರ್ತರು ಯಾವತ್ತೂ ಸಾಮಾಜಿಕ ನ್ಯಾಯದ ಪರ ದನಿ ಎತ್ತುವ ಜತೆಗೆ ಅನ್ಯಾಯವನ್ನು ವಿರೋಧಿಸಬೇಕು. ಬಡತನ, ಶಿಕ್ಷಣ, ವಸತಿ, ನಿರುದ್ಯೋಗದಂತಹ ಸಮಸ್ಯೆಗಳ ವಿರುದ್ಧ ಸದಾ ಹೋರಾಡುವ ಸ್ವಭಾವ ಬೇಕು.

ಮೌಲ್ಯಗಳು
ಜನರನ್ನು ಗೌರವಯುತವಾಗಿ ಕಾಣುವ ಜತೆಗೆ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣಬೇಕು. ಸಾರ್ವಜನಿಕರಿಗೆ ತಮ್ಮ ಜವಾಬ್ದಾರಿಯ ಜತೆಗೆ, ಸಾಮಾಜಿಕ ಕಾರ್ಯಗಳ ಅರಿವು ಮೂಡಿಸಬೇಕು.

ಮಾನವ ಸಂಬಂಧಗಳು
ಮಾನವ ಸಂಬಂಧಗಳಿಗೆ ಸಾಮಾಜಿಕ ಕಾರ್ಯಗಳಲ್ಲಿ ಮೊದಲ ಪ್ರಾಶಸ್ತ್ಯ ನೀಡ ಬೇಕಾಗುತ್ತದೆ. ಪ್ರತಿಯೊಂದು ಸಾಮಾ ಜಿಕ ಬದಲಾವಣೆಗೂ ಜನರ ನಡುವಿನ ಸಂಬಂಧಗಳೇ ಕಾರಣವಾಗುವುದರಿಂದ ಮಾನವ ಸಂಬಂಧಗಳ ಅಭಿವೃದ್ಧಿ ಅತ್ಯಗತ್ಯ.

ಸಮಗ್ರತೆ
ಸಾಮಾಜಿಕ ಸೇವಾಕರ್ತರು ಜನರ ನಂಬಿಕೆಗೆ ಅರ್ಹವಾಗುವಂತೆ ನಡೆದು ಕೊಳ್ಳಬೇಕು. ತಮ್ಮ ಧ್ಯೇಯೋದ್ದೇಶಗಳನ್ನು ಸದಾ ಮನವರಿಕೆ ಮಾಡುವುದಲ್ಲದೆ, ಪ್ರತಿ ಯೊಬ್ಬರ ಏಳ್ಗೆಯನ್ನು ಬೆಂಬಲಿಸಬೇಕು.

ಗುರಿ-ಉದ್ದೇಶಗಳು
ಅಂತಾರಾಷ್ಟ್ರೀಯ ಫೆಡರೇಶನ್‌ ಆಫ್ ಸೋಶಿಯಲ್‌ ವರ್ಕರ್ì ಎಂಬ ಸಂಘಟನೆಯು ವಿಶ್ವ ಸಾಮಾಜಿಕ ಕಾರ್ಯ ದಿನದ ಅಂಗವಾಗಿ 2010ರಿಂದ 2020ರ ವರೆಗೆ ಜಾಗತಿಕ ಕೆಲವು ಅಂಶಗಳ ಬಗ್ಗೆ ಗಮನಹರಿಸುತ್ತಿದೆ. ಆ ಅಂಶಗಳು ಇಲ್ಲಿವೆ.

1 ಸಮಾಜದಲ್ಲಿ ಎಲ್ಲ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸುವುದು.

2 ಜನರ ಘನತೆ ಮತ್ತು ಜೀವನ ಮೌಲ್ಯವನ್ನು ಸಾರುವುದು.

3 ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವುದು.

4 ಸಾಮಾಜಿಕ ಅಭಿವೃದ್ಧಿ ಸಾಧಿಸುವುದು.

  ಪ್ರಸನ್ನ ಹೆಗಡೆ ಊರಕೇರಿ, ಶಿವ ಸ್ಥಾವರಮಠ ನಿರ್ವಹಣೆ: ಮಂಗಳೂರು ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next