Advertisement

“ಸಮಾಜಮುಖೀ ಸಾಹಿತ್ಯ ರಚನೆ ಹೆಚ್ಚಾಗಲಿ”

04:23 PM Aug 14, 2022 | Team Udayavani |

ಬೀದರ: ಪ್ರಸ್ತುತ ಸಮಾಜದಲ್ಲಿ ಪ್ರಶ್ನಿಸುವ ಗುಣದೊಂದಿಗೆ ಸಮಾಜ ಮುಖೀಯಾದಂಥ ಸಾಹಿತ್ಯ ರಚನೆ ಇನ್ನಷ್ಟು ಅವಶ್ಯಕತೆ ಇದೆ ಎಂದು ಖ್ಯಾತ ನಟ, ಸಾಹಿತಿ ಸುಚೇಂದ್ರ ಪ್ರಸಾದ್‌ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಕಸಾಪ ಮತ್ತು ಕಪ್ಪಣ್ಣ ಅಂಗಳ ಬೆಂಗಳೂರು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪಾರ್ವತಿ ವಿ. ಸೋನಾರೆ ಅವರ “ಅಪ್ಪನೊಳಗೊಬ್ಬ ಅವ್ವ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಒಂದು ಪುಸ್ತಕ ಬಿಡುಗಡೆ ಮಾಡುವುದು ಎಂದರೆ ವಿಚಾರಧಾರೆಗಳನ್ನು ಅನಾವರಣಗೊಳಿಸುವುದು ಎಂದರ್ಥ. ಜತೆ ಜತೆಗೆ ಲೋಕಾರ್ಪಣೆಗೊಳ್ಳುತ್ತದೆ ಎಂದರೆ ಆ ವೇದಿಕೆ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಒಂದು ಸ್ಥಿತಿಯಿಂದ ಮತ್ತೂಂದು ಸ್ಥಿತಿಗೆ ಬದಲಾಗುವ ಈ ಕಾಲಘಟ್ಟದಲ್ಲಿ ಹಿತ ಅನ್ನಿಸುವಂಥ ಸಹಿತದ ಸಾಹಿತ್ಯ ರಚನೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿ ಪದ ಮತ್ತು ಅಕ್ಷರಕ್ಕೆ ನಾನಾ ಅರ್ಥ ಇದೆ. ಒಂದೊಂದು ಲೇಖನದಲ್ಲಿ ಎಷ್ಟೊಂದು ಅರ್ಥಗಳು ಅಡಗಿ ಕುಳಿತಿರುತ್ತವೆ. ಹಾಗಾಗಿ ಯಾವದೇ ಗ್ರಂಥವನ್ನು ಅಲ್ಪ ಎಂದು ಕಡೆಗಣಿಸದಿರಿ. ಕಂಬಳಿ ಹೊತ್ತು ಮಲಗುವ ನಮ್ಮಂಥವರಿಗೆ ಹಿರಿಯರು ತಮ್ಮ ಸಾಹಿತ್ಯದ ಮೂಲಕ ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದ ಸುಚೇಂದ್ರ ಪ್ರಸಾದ್‌, ಪಾರ್ವತಿ ಅವರ ಈ ಕೃತಿಯಲ್ಲಿ ಯಾವುದೂ ಕಪೋಲಕಲ್ಪಿತ ಕಥೆಗಳಲ್ಲ, ಅನೇಕರ ಜೀವನದ ವ್ಯಥೆಗಳಾಗಿವೆ. ಸತ್ಯ ಸಂಗತಿಯನ್ನು ಪರಾಮರ್ಶಿಸುವ ದಿಸೆಯಲ್ಲಿ ಸತ್ವಯುತವಾದ ಸಾಹಿತ್ಯ ಹೊರತಂದಿದ್ದಾರೆ ಎಂದು ಬಣ್ಣಿಸಿದರು.

ಪ್ರಾಚಾರ್ಯ ಡಾ| ಬಸವರಾಜ ಬಲ್ಲೂರ, “ಅಪ್ಪನೊಳಗೊಬ್ಬ ಅವ್ವ’ ಕೃತಿ ವೈಚಾರಿಕ ಲೇಖನಗಳ ಗುತ್ಛವಾಗಿದೆ. ಕೋವಿಡ್‌ ಸಂದಿಗ್ಧ ಸ್ಥಿತಿಯಲ್ಲಿನ ಜನರ ಯಾತನೆ, ತಲ್ಲಣ್ಣ ಮತ್ತು ಸುತ್ತಲಿನ ಜಗತ್ತಿನ ಒಟ್ಟು ಚಿತ್ರಣಗಳನ್ನು ತಮ್ಮ ಬರಹಗಳ ಮೂಲಕ ಹಿಡಿದಿಡುವ ಕೆಲಸ ಮಾಡಿದ್ದಾರೆ. ಮಹಿಳೆಯರ ಅಸ್ಮತೆಯ ಬಗ್ಗೆಯೂ ಇಲ್ಲಿದೆ. ಹಾಗಾಗಿ ಈ ಲೇಖನಗಳನ್ನು ಸಂಶೋಧನಾ ದೃಷ್ಟಿಯಿಂದ ನೋಡಬೇಕಾಗಿದೆ ಎಂದು ಹೇಳಿದರು.

ಡಾ| ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಚಿಂತಕಿ ಗುರಮ್ಮಾ ಸಿದ್ಧಾರೆಡ್ಡಿ ಮತ್ತು ಲೇಖಕಿ ಪಾರ್ವತಿ ಸೋನಾರೆ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಕೆ ಫೌಂಡೇಶನ್‌ ಅಧ್ಯಕ್ಷ ಗುರುನಾಥ ಕೊಳ್ಳೂರ, ಜೆ.ಎನ್‌ ಡಪಳಾಪೂರ್‌ ವೇದಿಕೆಯಲ್ಲಿದ್ದರು.

Advertisement

ಹಿರಿಯ ರಂಗಕರ್ಮಿ ಕಪ್ಪಣ್ಣ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು ಕೇಂದ್ರೀತ ಜನ ಕೂಪಮಂಡೂಕರಾಗಿ ಈ ಭಾಗದ ಕಲೆ, ಸಾಹಿತ್ಯಗಳಿಗೆ ಪರಂಪರೆಯೇ ಇಲ್ಲ ಎಂಬಂತೆ ಕಡೆಗಣಿಸುತ್ತಿರುವ ಹೊತ್ತಿನಲ್ಲಿ ಇಳಿವಯಸ್ಸಿನ ಕಪ್ಪಣ್ಣ ಈ ಪ್ರದೇಶದತ್ತ ಮುಖ ಮಾಡಿದ್ದು, ಇನ್ನೂ ಪ್ರವೇಶವೇ ಮಾಡದ ವಿವಿಧ ವಲಯಗಳು ಪರಮಾರ್ಶೆಗೊಳ್ಳಲಿ. ಅದಕ್ಕೆ ನಾವೆಲ್ಲರೂ ಸಮಿಪವರ್ತಿಗಳಾಗಿ ಸಹಯೋಗ ನೀಡುತ್ತೇವೆ. -ಸುಚೇಂದ್ರ ಪ್ರಸಾದ್‌ ಖ್ಯಾತ ನಟ, ಸಾಹಿತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next