ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿಯೂ ಅವರು ಸ್ಪರ್ಧಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಇನ್ನೂ ಕ್ಷೇತ್ರ ಸಿಕ್ಕಿಲ್ಲ. ವರುಣಾದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಅಪ್ಪನಿಗಾಗಿ ಮಗ ದೊಡ್ಡ ತ್ಯಾಗ ಮಾಡಿದ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ವರುಣಾದಲ್ಲಿ ಸೋಲುವ ಭಯಕ್ಕೆ ಮತ್ತೂಂದು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಕೋಲಾರ ಸೇರಿದಂತೆ ಬೇರೆ ಬೇರೆ ಕಡೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಶಾಸಕರಿಗೆ ಡಿಕೆಶಿ ಕರೆ ಮಾಡಿ ಆಹ್ವಾನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್‌ನವರು ಭ್ರಮನಿರಸನಗೊಂಡಿದ್ದಾರೆ. ಕಾಂಗ್ರೆಸ್ ಬಳಿ ಚುನಾವಣೆಗೆ ನಿಂತು ಗೆಲ್ಲುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅವರು ಈ ರೀತಿ ಮಾಡುತ್ತಿದ್ದಾರೆ. ಶಾಸಕ ಗೋಪಾಲಕೃಷ್ಣ ರಾಜೀನಾಮೆ ಕೊಟ್ಟಿದ್ದಾರೆಂದು ಕೇಳಿದ್ದೇನೆ. ಇನ್ನುಳಿದವರು ನನ್ನ ಸಂಪರ್ಕದಲ್ಲಿದ್ದಾರೆ ಎಂದರು.
ಯಾರಿಗೆ ಟಿಕೆಟ್ ನೀಡಬೇಕೆನ್ನುವುದರ ಬಗ್ಗೆ ಕೋರ್ ಸಮಿತಿಯಲ್ಲಿ ಚರ್ಚೆ ಆಗುತ್ತದೆ. ಯಾರಿಗೆ ಟಿಕೆಟ್ ಸಿಗುವುದಿಲ್ಲವೋ ಅವರಿಗೆ ಸಮಾಧಾನ ಮಾಡುವ ಬಗ್ಗೆಯೂ ಚರ್ಚೆ ಆಗುತ್ತದೆ. ಗೆಲ್ಲುವ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಆಕಾಂಕ್ಷಿಗಳು ಇರುತ್ತಾರೆ ಎಂದರು. ಟಿಕೆಟ್ ಕುರಿತು ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಬಹಿರಂಗ ಹೇಳಿಕೆ ಬಗ್ಗೆ ಅವರು ಮಾತನಾಡಿ, ಅವರಿಬ್ಬರಿಗೂ ಬಹಿರಂಗವಾಗಿ ಮಾತಾಡದಂತೆ ತಾಕೀತು ಮಾಡಿ
ದ್ದೇವೆ. ಎಲ್ಲವನ್ನೂ ಗಮನಿಸುತ್ತಿದ್ದೇವೆ, ಎಲ್ಲವನ್ನೂ ಸರಿ ಮಾಡುತ್ತೇವೆ. ಬೆಳಗಾವಿಯಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ ಇಲ್ಲ ಎಂದರು.