ಚಿತ್ರದುರ್ಗ: ಜನ ಸಂಕಲ್ಪ ಸಮಾವೇಶದಲ್ಲಿ ಸಾಕಷ್ಟು ಜನ ಸೇರುತ್ತಿದ್ದಾರೆ. ಇದು ಮುಂದೆ ವಿಜಯ ಸಂಕಲ್ಪ ಯಾತ್ರೆ ಆಗಲಿದೆ. ಬೇಕಿದ್ದರೆ ಸಿದ್ದರಾಮಯ್ಯ ಬಂದು ನೋಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಜನರ ಕೊರತೆ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಆಹ್ವಾನ ನೀಡುತ್ತೇವೆ ಬೇಕಿದ್ದರೆ ಸಿದ್ದರಾಮಯ್ಯ ಬಂದು ಯಾತ್ರೆ ನೋಡಲಿ ಎಂದು ಸವಾಲು ಹಾಕಿದರು.
ಹಿಂದೂ ಶಬ್ದದ ಕುರಿತು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಶತ ಶತಮಾಗಳ ನಂಬಿಕೆಗೆ ಕೊಡಲಿ ಪೆಟ್ಟು ಕೊಡುವ ಕೆಲಸ ನಡೆದಿದೆ. ಇದರಲ್ಲಿ ಸಾಬೀತು ಮಾಡುವುದು ಏನಿದೆ ಎಂದರು.
ನಂಬಿಕೆ, ವಿಶ್ವಾಸದ ಮೇಲೆ ಧರ್ಮ ನಡೆಯುತ್ತಿದೆ, ಅದಕ್ಕೆ ಘಾಸಿ ಮಾಡುತ್ತಿದ್ದಾರೆ. ಅವರ ಶಾಲಾ ದಾಖಲಾತಿಯಲ್ಲಿ ಹಿಂದೂ ಎಂದು ಇದೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಸರ್ಟಿಫಿಕೇಟ್ ತಾಂತ್ರಿಕ ಆಗಿರಬಹುದು. ಆದರೆ, ಶತಮಾನಗಳ ನಂಬಿಕೆ ಇದೆ, ಅದಕ್ಕೆ ಘಾಸಿಯಾದಾಗ ಚರ್ಚೆ ಮಾಡಲು ಏನಿದೆ, ಚರ್ಚೆಯೂ ಬೇಕಿಲ್ಲ, ಕ್ಷಮೆಯೂ ಬೇಕಿಲ್ಲ, ಜನ ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಮುರುಘಾ ಮಠದ ಪ್ರಕರಣ ವರದಿ ಬಳಿಕ ಕ್ರಮ:
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಮನವಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ವರದಿ ಕೇಳಿದ್ದಾರೆ. ಅದು ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಉಳಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.