ಧಾರವಾಡ: ಬದುಕು ಇರುವುದು ಸೇವೆ ಮಾಡಲಿಕ್ಕೆ ಹೊರತು ಸೇವೆ ಮಾಡಿಸಿಕೊಳ್ಳಲು ಅಲ್ಲ. ಹೀಗಾಗಿ ಜೀವನದಲ್ಲಿ ಎಷ್ಟೇ ಉನ್ನತಿ ಹೊಂದಿದರೂ ಸೇವೆಯನ್ನೇ ಪ್ರಧಾನ ಕಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದು ಕಿಟೆಲ್ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ| ಎಸ್.ಎಸ್. ಅಂಟೀನ್ ಹೇಳಿದರು.
ಕಿಟೆಲ್ ಕಾಲೇಜಿನಲ್ಲಿ 2000ನೇ ಸಾಲಿನ ಪದವಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪದವಿ ಮುಗಿಸಿ 22 ವರ್ಷಗಳ ನಂತರ ನೀವು ಸೇರಿದ್ದೀರಿ. ಓದುವಾಗ ಕೂಡ ನಮ್ಮ ಕಾಲೇಜಿನಲ್ಲಿ ನಾವು ನಿಮಗೆ ಸಮಾಜ ಸೇವೆ ಬಗ್ಗೆ ಬೋಧಿಸಿದ್ದೆವು. ಬಹಳಷ್ಟು ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿನ ಜತೆಗೆ ಬಡವರಿಗೆ, ದೀನ ದಲಿತರ ಸೇವೆ ಮಾಡುತ್ತಿದ್ದೀರಿ.
ವಿದ್ಯಾರ್ಥಿ ಜೀವನದಲ್ಲಿ ನೀವು ಕಲಿತ ಉತ್ತಮ ಗುಣಗಳು ಇಂದು ಸಮಾಜಕ್ಕೆ ಅನುಕೂಲವಾಗುತ್ತಿವೆ. ಒಬ್ಬ ಗುರುವಿಗೆ ಇದಕ್ಕಿಂತಲೂ ಸಂತೋಷದ ಸಂಗತಿ ಬೇರೊಂದಿಲ್ಲ. ಮುಂದೆಯೂ ನಿಮ್ಮ ಬದುಕು ಹೀಗೆ ಸಾಗಲಿ ಎಂದು ಹಾರೈಸಿದರು.
ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಹಿರಿಯ ಸಾಹಿತಿ ಡಾ| ಜಿ.ಎಂ. ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆ ನಂತರ ಬದುಕಿನಲ್ಲಿ ಸಾಧನೆ ಮಾಡಿ ಎಂದಷ್ಟೆ ಗುರುಗಳು ಹೇಳಿರುತ್ತೇವೆ. ಅದನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮತ್ತು ಉತ್ತಮ ಬದುಕು ರೂಪಿಸಿಕೊಳ್ಳುವ ಹೊಣೆ ಅವರದಾಗಿರುತ್ತದೆ. ಕಿಟೆಲ್ ಕಾಲೇಜಿನ 2000ನೇ ಸಾಲಿನಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಇಂದು ಸಮಾಜದ ಎಲ್ಲಾ ಕ್ಷೇತ್ರದಲ್ಲಿಯು ಮುಂಚೂಣಿಯಲ್ಲಿದ್ದಾರೆ. ಇದನ್ನು ನೋಡಲು ಸಂತೋಷವಾಗುತ್ತದೆ ಎಂದರು.
ಕಿಟೆಲ್ ಕಾಲೇಜಿನ ಪ್ರಾಚಾರ್ಯರಾದ ಡಾ| ರೇಖಾ ಜೊಗೂಳ ಮಾತನಾಡಿ, ಕಲಿತ ಕಾಲೇಜನ್ನು ಮರೆಯದೇ ಸ್ಮರಿಸುವ ವಿದ್ಯಾರ್ಥಿಗಳಿಗೆ ಸದಾ ಯಶಸ್ಸು ಇದ್ದೇ ಇರುತ್ತದೆ. 2000ನೇ ಸಾಲಿನ ವಿದ್ಯಾರ್ಥಿಗಳು ಇದೇ ಪ್ರಥಮ ಬಾರಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡು ಇತರರಿಗೆ ಮಾದರಿ ಕಾರ್ಯ ಮಾಡಿದ್ದೀರಿ. ಇದೇ ರೀತಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವನ್ನು ಕಟ್ಟಿ ನೋಂದಣಿ ಮಾಡಿಸಿ ಅದರ ಮೂಲಕ ಇನ್ನಷ್ಟು ಉತ್ತಮ ಕಾರ್ಯಗಳನ್ನು ನೋಡುವಂತಾದರೆ ಅನುಕೂಲವಾಗಲಿದೆ ಎಂದರು. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೆಲ್ಲರನ್ನು ವಿದ್ಯಾರ್ಥಿಗಳು ಗೌರವಿಸಿದರು.ಹಳೆಯ ವಿದ್ಯಾರ್ಥಿ ಸುನೀಲ್ ಗುಡಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತ ಡಾ| ಬಸವರಾಜ್ ಹೊಂಗಲ್ ನಿರೂಪಿಸಿದರು. ತುಳಜಾ ಕುಲಕರ್ಣಿ ಪ್ರಾರ್ಥಿಸಿದರು. ಶರೀಫ್ ರೋಣ ವಂದಿಸಿದರು.
ಕಾಲೇಜು ಆವರಣದಲ್ಲಿ ಹಬ್ಬದ ವಾತಾವರಣ
ಕಿಟೆಲ್ ಕಾಲೇಜು ಆವರಣ ಬಾಳೆದಿಂಡು, ತಳಿರು ತೋರಣ, ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡಿತ್ತು. ಹಳೇ ವಿದ್ಯಾರ್ಥಿಗಳು ತಲೆಗೆ ಪೇಟಾ ಸುತ್ತಿ ಕೈಯಲ್ಲಿ ಹೂ ಹಿಡಿದು ತಮಗೆ ಕಲಿಸಿದ ಗುರುಗಳ ಸ್ವಾಗತಕ್ಕೆ ಕಾಯುತ್ತಿದ್ದರು. ಬಂದ ಗುರುಗಳ ಪಾದಗಳಿಗೆ ನಮಸ್ಕರಿಸಿ ಅವರಿಗೆ ತಮ್ಮ ಪರಿಚಯ ಮಾಡಿಕೊಂಡು ಕಾಲೇಜು ದಿನಗಳಲ್ಲಿ ತಾವು ಮಾಡಿದ ಸಾಧನೆಗಳನ್ನು ಮೆಲಕು ಹಾಕಿದರು. ಬೆಳಗ್ಗೆಯಿಂದ ಸಂಜೆವರೆಗೂ ತಾವು ಓದಿದ್ದ ವಿವಿಧ ಕ್ಲಾಸ್ ರೂಮ್‌ಗಳಲ್ಲಿ ಕುಳಿತು ಪಾಠ ಕೇಳಿ ಖುಷಿಪಟ್ಟರು. ಗ್ರಂಥಾಲಯದಲ್ಲಿ ಕುಳಿತು ಓದಿನ ನೆನಪು ಮೆಲಕು ಹಾಕಿದರು. ಭಕ್ಷ್ಯ ಭೋಜನವನ್ನು ಖುದ್ದು ತಮ್ಮ ಗುರುಗಳಿಗೆ ತಾವೇ ತಿನ್ನಿಸಿ ಖುಷಿಪಟ್ಟರು. ಇಡೀ ದಿನ ಕಾಲೇಜಿನ ಆವರಣ 90ರ ದಶಕದ ನೆನಪುಗಳಿಗೆ ಮರಳುವಂತೆ ಮಾಡಿದ್ದರು.