ಶಿರ್ವ: ಸಮಾಜವನ್ನು ಜಾಗೃತಗೊಳಿಸಿ ಸಂಘಟನೆ ಬಲಪಡಿಸಲು ಮನೆಯ ಮಕ್ಕಳು ಪರಕೀಯರಾಗದಂತೆ ಪ್ರೇರಣೆ ನೀಡಿ ನಮ್ಮ ಸಂಸ್ಕೃತಿ, ಸಂಸ್ಕಾರ ಆಚಾರ ವಿಚಾರಗಳನ್ನು ಕಲಿಸಿ ಹಿಂದೂ ಧರ್ಮದಲ್ಲಿಯೇ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು. ಆ ಮೂಲಕ ಧರ್ಮ ಜಾಗೃತವಾಗಲು ಸಮಾಜೋತ್ಸವ ಸ್ಪೂರ್ತಿ ನೀಡಿ ರಾಮರಾಜ್ಯ ನಿರ್ಮಾಣವಾಗಲಿ ಎಂದು ಅಯೋಧ್ಯಾ ಶ್ರೀರಾಮ ಜನ್ಮಭೂಮಿ, ಶ್ರೀರಾಮಮಂದಿರ ನಿರ್ಮಾಣ ಸಮಿತಿಯ ವಿಶ್ವಸ್ಥ, ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಅವರು ನ. 27 ರಂದು ಮಟ್ಟಾರು ಕೂಡಲ್ಕೆ ಮೈದಾನದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ ಮತ್ತು ಮಟ್ಟಾರು ಮಾತೃಶಕ್ತಿ ದುರ್ಗಾವಾಹಿನಿಯ ನೇತೃತ್ವದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿ ಆಶೀರ್ವವಚನ ನೀಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮೂಡಬಿದ್ರಿ ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ತ್ಯಾಗ ಮತ್ತು ಶೌರ್ಯದ ಪ್ರತೀಕವಾದ ಕೇಸರಿ ಶಾಲು ಧರಿಸಿದ ಮಟ್ಟಾರಿನ ಹಿಂದೂ ಬಾಂಧವರು ಸಮಾಜಕ್ಕೆ ಮಾದರಿಯಾಗಿ ಧರ್ಮ ಸದೃಢವಾಗಲಿ ಎಂದು ಹೇಳಿದರು.
ಕುತ್ಯಾರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಮತ್ತು ಸುರತ್ಕಲ್ ಕುಳಾಯಿ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಚಿಂತಕ, ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಿ ಮನೆಮನೆಯಲ್ಲಿ ಹಿಂದೂ ಧರ್ಮದ ಚಿಂತನೆ ನಡೆದು ಹಿಂದೂ ಸಮಾಜ ಒಗ್ಗಟ್ಟಾಗುವ ಶಕ್ತಿ ಜಗತ್ತಿನಲ್ಲಿ ಅನಾವರಣಗೊಂಡಾಗ ಜಗತ್ತು ಶಾಂತಿಯಿಂದ ನೆಲೆಸುತ್ತದೆ ಎಂದು ಹೇಳಿದರು.
ಮಟ್ಟಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಹಿಂಪ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಂಚಾಲಕ ಸಂಚಾಲಕ ಸುನೀಲ್ ಕೆ.ಆರ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ, ಉಡುಪಿ ಜಿಲ್ಲಾ ಮಾತೃಪ್ರಮುಖ್ ಪೂರ್ಣಿಮಾ ಸುರೇಶ್, ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿರ್ವನಡಿಬೆಟ್ಟು ನಿತ್ಯಾನಂದ ಹೆಗ್ಡೆ, ವಿಹಿಂಪ ಗೌರವಾಧ್ಯಕ್ಷ ವಿಜಯ ಪೂಜಾರಿ, ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಬಜರಂಗದಳ ಸಂಚಾಲಕ ವಿಶ್ವನಾಥ ಆಚಾರ್ಯ, ಮಾತೃಶಕ್ತಿ ಪ್ರಮುಖ್ ಸುಲೋಚನಾ ಆಚಾರ್ಯ ಮತ್ತು ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು ವೇದಿಕೆಯಲ್ಲಿದ್ದರು.
ವಿಹಿಂಪ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜೇಂದ್ರ ಶೆಣೈ ಸ್ವಾಗತಿಸಿದರು. ಎನ್.ಆರ್.ದಾಮೋದರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಿಖ್ಯಾತ್ ಭಟ್ ವಂದಿಸಿದರು.
ಬೃಹತ್ ಬೈಕ್ ರ್ಯಾಲಿ ಸಮಾಜೋತ್ಸವದ ಪೂರ್ವಭಾವಿಯಾಗಿ ಮಧ್ಯಾಹ್ನ ಶಿರ್ವ ಪೇಟೆಯಿಂದ ನಡೆದ ಬೃಹತ್ ಬೈಕ್ ರ್ಯಾಲಿಗೆ ಶಿರ್ವ ಗಾ.ಪಂ. ಅಧ್ಯಕ್ಷ ರತನ್ ಶೆಟ್ಟಿ ಚಾಲನೆ ನೀಡಿದರು.
ಬೆಳ್ಳೆ ನಾಲ್ಕು ಬೀದಿ ಜಂಕ್ಷನ್ ನಿಂದ ಮಟ್ಟಾರು ಕೇಂದ್ರ ಸ್ಥಾನಕ್ಕೆ ನಡೆದ ಬೃಹತ್ ಶೋಭಾಯಾತ್ರೆಗೆ ವಿಹಿಂಪ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಮತ್ತು ಉದ್ಯಮಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಚಾಲನೆ ನೀಡಿದರು.