Advertisement

ಒಳಿತು ನಮ್ಮ ದೃಷ್ಟಿಯಾಗಲಿ ; ಸೃಷ್ಟಿಯೆಲ್ಲವೂ ಒಳಿತಾಗಿಯೇ ಇರುತ್ತದೆ

06:44 AM Jan 01, 2021 | Team Udayavani |

ಕಾಲವನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಹಾಗಾದರೆ ಒಗ್ಗಿಕೊಂಡು ನಡೆಯುವುದಷ್ಟೇ ನಮ್ಮ ಭಾಗ್ಯ. ಹೊಸತು ನಾಳೆಗಳನ್ನು ಸೃಷ್ಟಿಸಲು ಬೇಕಾಗುವುದು ಅದಮ್ಯ ಉತ್ಸಾಹ ಹಾಗೂ ಅಪರಿಮಿತ ಆತ್ಮವಿಶ್ವಾಸ. ಅವೆರಡೂ ನಮ್ಮದಾದರೆ ಯಾವ ಬದಲಾವಣೆಯೂ ನಮ್ಮನ್ನೇನೂ ಮಾಡದು.

Advertisement

ಆದಿ ಮತ್ತು ಅಂತ್ಯಗಳಿಲ್ಲದ ಕಾಲದ ಮಹಾಪ್ರವಾಹದಲ್ಲಿ ನಮ್ಮ ಅನುಕೂಲ ಮತ್ತು ತಿಳಿವಳಿಕೆಗಾಗಿ ಗುರುತಿಸಿಕೊಂಡ ಒಂದು ಹೊಸ ಆರಂಭ ಬಿಂದು ಎಂಬುದು ಹೊಸ ವರ್ಷ. ಸೆಕೆಂಡು, ನಿಮಿಷ, ಗಂಟೆ, ದಿನ, ವಾರ, ತಿಂಗಳು, ವರ್ಷ, ದಶಕ, ಶತಮಾನ…ಹೀಗೆ ನಾವು ಹಾಕಿಕೊಂಡ ಬಿಂದುಗಳಲ್ಲಿ ಇದೂ ಒಂದು. 2021ರ ಆರಂಭ; ಗತಿಸಿದ ಕಾಲಕ್ಕೆ ವಿದಾಯ, ಎದುರಾಗಿರುವ ವರ್ಷಕ್ಕೆ ಸ್ವಾಗತ.

ಕಾಲವು ಎಂದೂ ನಿಲ್ಲದ್ದು. ಹಿಂದೆ ಹೋಗಲೂ ಸಾಧ್ಯವಿಲ್ಲ, ಮುಂದಕ್ಕೆ ತೆರಳಲೂ ಆಗದು; ಅದನ್ನು ನಿಧಾನಗೊಳಿಸುವುದು ಅಥವಾ ವೇಗವರ್ಧಿಸುವುದು ನಮ್ಮಿಂದ ಅಸಾಧ್ಯ. ಅದರ ಜತೆಗೇ ಸಾಗುವುದೊಂದೆ ನಮ್ಮ ಕೈಯಲ್ಲಿರುವಂಥದ್ದು. ಕಾಲಚಕ್ರ ಎಂಬುದು ಒಂದು ಪರಿಕಲ್ಪನೆ ಮಾತ್ರ; ನಿಜವಾಗಿಯೂ ಅದು ಚಕ್ರರೂಪದಲ್ಲಿಲ್ಲ. ಚಕ್ರ ಎಂದರೆ ವೃತ್ತ, ಹೊರಟ ಬಿಂದುವಿಗೆ ಮರಳಬೇಕು. ಕಾಲದಲ್ಲಿ ಅದು ಅಸಾಧ್ಯ. ಆದರೆ ಕಳೆದ‌ ಕಾಲದ ಪುನರಾವಲೋಕನ ಸಾಧ್ಯ.

ಹತ್ತು ವರ್ಷಗಳಲ್ಲಿ ಜಗತ್ತು ಅತ್ಯದ್ಭುತ ರೀತಿಯಲ್ಲಿ ಮತ್ತು ಅನೂಹ್ಯ ವೇಗದಲ್ಲಿ ಬದಲಾಗಿದೆ. 2010ರ ದಶಕದ ಮೊದಲ ವರ್ಷದಲ್ಲಿ ಭಾರತವನ್ನು ಪ್ರವೇಶಿಸಿದ ವಾಟ್ಸ್‌ಆ್ಯಪ್‌ ಮತ್ತು ಇನ್ನಿತರ ಸಾಮಾಜಿಕ ಮಾಧ್ಯಮಗಳು ಸಂವಹನ, ಸುದ್ದಿ ಪ್ರಸರಣದ ಸ್ವರೂಪವನ್ನೇ ಬದಲಾಯಿಸಿವೆ. 2011ರಲ್ಲಿ ಉಸಾಮಾ ಬಿನ್‌ ಲಾದನ್‌ ಹತ್ಯೆ, 2012ರಲ್ಲಿ ಅಣ್ಣಾ ಹಜಾರೆ ಉಪವಾಸ; 2012ರಲ್ಲಿ ಆಮ್‌ ಆದ್ಮಿ ಪಕ್ಷ ಸ್ಥಾಪನೆ, ಅಜ್ಮಲ್‌ ಕಸಬ್‌ಗ ಗಲ್ಲು; 2013 ರಲ್ಲಿ ಸಚಿನ್‌ ತೆಂಡೂಲ್ಕರ್‌ ನಿವೃತ್ತಿ, ಟೆಲಿಗ್ರಾಂ ಅಂತ್ಯ, ಉತ್ತರ ಭಾರತದಲ್ಲಿ ಪ್ರವಾಹ; 2014ರಲ್ಲಿ ಪ್ರಧಾನಿಯಾಗಿ ಮೋದಿ ಆಯ್ಕೆ, ಮಂಗಳಯಾನ; 2015ರಲ್ಲಿ ನೇಪಾಲದ ಭೂಕಂಪ, ಅಬ್ದುಲ್‌ ಕಲಾಮ್‌ ದೇಹಾಂತ್ಯ; 2016ರಲ್ಲಿ ನೋಟು ರದ್ದತಿ, ಅಮೆರಿಕದಲ್ಲಿ ಟ್ರಂಪ್‌ ಆಯ್ಕೆ; 2017ರಲ್ಲಿ ಜಿಎಸ್‌ಟಿ ಜಾರಿ, ಇಸ್ರೋದಿಂದ ಏಕಕಾಲಕ್ಕೆ 104 ಕೃತಕ ಉಪಗ್ರಹ ಉಡಾವಣೆ; 2018ರಲ್ಲಿ ಕೇರಳ- ಕೊಡಗು ಪ್ರವಾಹ, 2019ರಲ್ಲಿ ಅಯೋಧ್ಯೆ ತೀರ್ಪು, ಚಂದ್ರಯಾನ – 2, ಬಾಲಾಕೋಟ್‌ ದಾಳಿ ಎಂದಾದರೆ, 2020 ನ್ನು ಕೇವಲ ಒಂದೇ ಪದ ಆಳಿದ್ದು-ಅದು ಕ್ವಾರಂಟೈನ್‌.

ಕೊರೊನಾ-ಲಾಕ್‌ಡೌನ್‌, ಆರ್ಥಿಕ ಕುಸಿತ ಇತ್ಯಾದಿ ಎಲ್ಲವೂ ಮುಗಿದ ಮೇಲೆ ಸುಖದ ಶಕೆ ಆರಂಭವಾಗಬೇಕು. ಅದರ ನಿರೀಕ್ಷೆಯಲ್ಲೇ ಜಗತ್ತಿದೆ, ನಾವೂ ಸಹ. ಯಾವುದೂ ಶಾಶ್ವತವಲ್ಲ ಎಂಬುದು ಸಂಸ್ಕೃತದ ಒಂದು ಉಕ್ತಿಯ ಅರ್ಥ. ಹಾಗಾಗಿ ಕೊರೊನಾ ಸಂಕಷ್ಟವೂ ಅಂತ್ಯವಾಗಲೇ ಬೇಕು. ಆ ಹಾದಿಯಲ್ಲಿದ್ದೇವೆ ಎನ್ನುವುದು ಸ್ಪಷ್ಟ.

Advertisement

2020ರ ಈ ನೇತ್ಯಾತ್ಮಕ ಮುಖಕ್ಕೆ ಇತ್ಯಾತ್ಮಕ ಆಯಾಮವೂ ಇದೆ. ಬದುಕುವ ಹೊಸ ದಾರಿಗಳನ್ನು ಕಂಡುಕೊಂಡಿದ್ದೇವೆ. ಕುಟುಂಬಕ್ಕಾಗಿ ಸಮಯ ಕೊಡುವುದನ್ನು ಕಲಿತಿದ್ದೇವೆ. ಉದ್ಯೋಗ ನಿರ್ವಹಿ ಸುವ ಹೊಸ ವಿಧಾನಗಳು ಮುನ್ನೆಲೆಗೆ ಬಂದಿವೆ. ಬದುಕಿನ ಬಗೆಗಿನ ತಿಳಿವಳಿಕೆ ಬದಲಾಗಿದೆ. ಸಾಂಕ್ರಾ ಮಿಕದ ಕಾಲಘಟ್ಟವನ್ನು ಹಾದುಬಂದ ಅನುಭವವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬದುಕಬಲ್ಲೆ ಎಂಬ ಛಾತಿಯನ್ನು ಒದಗಿಸಿಕೊಟ್ಟಿದೆ.

ಕೊರೊನಾ ತಂದ ಬದಲಾವಣೆಗಳು ಒಂದು ಜೀವಮಾನದ ಅನುಭವ. ಅದು ಕಲಿಸಿದ ಪಾಠಗಳು ನಮ್ಮೆದುರು ಇರುವ ದಶಕದಲ್ಲಿ ಇನ್ನಷ್ಟು ಬದಲಾವಣೆಗಳಿಗೆ ಕಾರಣವಾಗಲಿರುವುದು ನಿಶ್ಚಿತ.

ನಾವು ಸ್ವೀಕರಿಸಲಿ, ಬಿಡಲಿ; ಸ್ವಾಗತಿಸಲಿ, ನಿರಾ ಕರಿಸಲಿ; ಪರಿವರ್ತನೆಗಳಂತೂ ಶಾಶ್ವತ. ಅದು ಅಷ್ಟು ಖಚಿತವಾಗಿರುವಾಗ ನಿರಾಕರಣೆಯೇಕೆ! ಬದಲಾ ಗಲು ಸದಾ ಸಿದ್ಧ ಎಂಬ ಸ್ವೀಕಾರ ಭಾವದಿಂದಲೇ ಮತ್ತೂಂದು ಹೊಸ ವರ್ಷಕ್ಕೆ ಕಾಲಿಡೋಣ.

Advertisement

Udayavani is now on Telegram. Click here to join our channel and stay updated with the latest news.

Next