ಕಾಪು: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ತಯಾರಿಯ ಬಗ್ಗೆ ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿ ಸಭೆಯು ಕಾಪು ರಾಜೀವ್ ಭವನದಲ್ಲಿ ನಡೆಯಿತು.
ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳೊಂದಿಗೆ ಸಮಾಲೋಚನೆ ನಡೆಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಒಪ್ಪಂದದಂತೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣಕ್ಕಿಳಿದಿದ್ದಾರೆ.
ಮೈತ್ರಿ ಸರಕಾರದ ಉಳಿವಿಗಾಗಿ ಪ್ರಮೋದ್ ಅವರ ಗೆಲುವು ಅತ್ಯಗತ್ಯವಾಗಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರತೀಯೊಬ್ಬ ಕಾರ್ಯಕರ್ತರೂ ಕೂಡಾ ಪ್ರಾಮಾಣಿಕವಾಗಿ ಶ್ರಮಿಸಿ, ಮೈತ್ರಿ ಧರ್ಮ ಪಾಲನೆಗೆ ಬದ್ಧರಾಗುವಂತೆ ಕರೆ ನೀಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲುವು ಸುಲಭ ಸಾಧ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಾದ ಸೋಲಿನಿಂದ ಪಾಠ ಕಲಿತು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮತಗಳೊಂದಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡೋಣ ಎಂದರು.
ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಾದಿಕ್, ಪುರಸಭಾ ಸದಸ್ಯರಾದ ಅಶ್ವಿನಿ, ಉಸ್ಮಾನ್, ಹರೀಶ್ ನಾಯಕ್, ಪಕ್ಷದ ಮುಖಂಡರಾದ ಸುನಿಲ್ ಬಂಗೇರ, ಕಾಪು ದಿವಾಕರ ಶೆಟ್ಟಿ, ಮನಹರ್ ಇಬ್ರಾಹಿಂ, ಮಹಾಬಲ ಕುಂದರ್, ವಿಕ್ರಮ್ ಕಾಪು, ದೇವರಾಜ್ ಕೋಟ್ಯಾನ್, ಬಾಬಣ್ಣ ನಾಯಕ್, ಲವ ಕರ್ಕೆàರ, ಮಾಧವ್ ಪಾಲನ್, ಕಾಪು ಬ್ಲಾಕ್ ಜೆಡಿಎಸ್ ಅಧ್ಯಕ್ಷ ಸುಧಾಕರ್ ಹೆಜಮಾಡಿ, ಜೆಡಿಎಸ್ ಮುಖಂಡರಾದ ಹಮೀದ್ ಯೂಸುಫ್, ಇಸ್ಮಾಯಿಲ್ ಪಲಿಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಅಮೀರ್ ಕಾಪು ವಂದಿಸಿದರು.