ಬೆಂಗಳೂರು: ದೇಶವನ್ನು ಬಡತನ, ಅಸ್ಪ್ರಶ್ಯತೆ, ಅಸಮಾನತೆ ಮುಕ್ತವಾಗಿಸಲು ರಾಜಕೀಯ ಪಕ್ಷಗಳು ಆದ್ಯತೆ ನೀಡಲಿ ಎಂದು ಮಾಜಿ ಸಚಿವೆ ಹಾಗೂ ಸಾಹಿತಿ ಡಾ.ಬಿ.ಟಿ.ಲಲಿತಾನಾಯಕ್ ಅಭಿಪ್ರಾಯಪಟ್ಟರು.
ಅಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆದ ಸಾಹಿತ್ಯ ರಚನಾ ಕಮ್ಮಟದಲ್ಲಿ “ಬಂಡಾಯ ಸಾಹಿತ್ಯದ ಹಿನ್ನೆಲೆ’ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಇಂದಿಗೂ ದೌರ್ಜನ್ಯ, ಜಾತೀಯತೆ, ಕೋಮುವಾದ ಶಕ್ತಿಗಳು ಬೇರೂರಿವೆ. ಇವುಗಳ ವಿರುದ್ಧ ಬಂಡಾಯ ಶಕ್ತಿ ಮೊಳಗಬೇಕು ಎಂದರು.
ಚುನಾವಣೆ ಸಂಧರ್ಭದಲ್ಲಿ ಬಿಜೆಪಿ ಮುಕ್ತ, ಕಾಂಗ್ರೆಸ್ ಮುಕ್ತ ಎಂದು ಅಬ್ಬರದ ಘೋಷಣೆಗಳ ಬದಲಿಗೆ ದೇಶವನ್ನು ಕಾಡುವ ಹಸಿವು, ಅಸ್ಪಶ್ಯತೆ ಸಮಸ್ಯೆಗಳನ್ನು ಮುಕ್ತ ಮಾಡುತ್ತೇವೆ ಎಂಬ ಹೊಸ ಚಿಂತನೆಗೆ ತೆರೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಸಾಹಿತಿಯ ಬರವಣಿಗೆಗೆ ಎಂದಿಗೂ ಅಕ್ಷರ ಹಾಗೂ ಕ್ರಿಯಾ ಆಯಾಮವಿರಬೇಕು. ಈ ಸಾಧ್ಯತೆಗಳನ್ನು ಬಳಸಿಕೊಂಡು ಗಟ್ಟಿ ಸಾಹಿತ್ಯ ರಚಿಸಬೇಕು. ಅನಿವಾರ್ಯವಾದರೆ ಕ್ರಿಯೆಗೆ ಇಳಿಯಬೇಕು.
ಅಲ್ಲದೆ, ಕಳೆದ 40 ವರ್ಷಗಳ ಹಿಂದೆ ಬಂಡಾಯ ಸಾಹಿತ್ಯ ಯಾವ ಸವಾಲುಗಳನ್ನು ಎದುರಿಸುತ್ತಿತ್ತೋ, ಅವು ಇನ್ನೂ ಜೀವಂತವಾಗಿವೆ. ಹೀಗಾಗಿ ಬಂಡಾಯ ಭೂತಕಾಲದ್ದರೂ ಇಂದಿನ ತುರ್ತಾಗಿದ್ದು, ಸಮಾಜಘಾತುಕ ಶಕ್ತಿಗಳನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.
ಮಂಡ್ಯ ಜಿಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ ಸತೀಶ್ ಜವರೇಗೌಡ, ಕರ್ನಾಟಕ ಕೈಗಾರಿಕಾ ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ, ಅಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ.ಸುರೇಶ್ ಉಪಸ್ಥಿತರಿದ್ದರು.