Advertisement

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

08:37 PM Oct 20, 2020 | Mithun PG |

ಬೆಂಗಳೂರು: ಜನತೆಗೆ ಕರ್ತವ್ಯಪಾಲನೆಯ ಪಾಠ ಮಾಡುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಕರ್ತವ್ಯಪಾಲನೆ  ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು.ಕೋವಿಡ್ ಸೋಂಕಿನ ನಿಯಂತ್ರಣ ಮತ್ತು ಅದರಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ಜನತೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಏನು ಮಾಡಿದೆ ಮತ್ತು ಮುಂದಿನ ದಿನಗಳಲ್ಲಿ ಏನು ಮಾಡಲಿದೆ ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಾಗಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಮಾಡಿರುವ ಭಾಷಣಕ್ಕೆ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ,  ದೇಶದ ಜನತೆಗೆ ಬುದ್ದಿವಾದ ಹೇಳುವ ಮೂಲಕ ಪ್ರಧಾನಿಯವರು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಹತಾಶ ಪ್ರಯತ್ನವನ್ನಷ್ಟೇ ಮಾಡಿದ್ದಾರೆ. ಕೋವಿಡ್  ಸೋಂಕು ಉಲ್ಬಣಕ್ಕೆ ಜನರ ನಿರ್ಲಕ್ಷಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನವೂ ಕಾರಣ ಎನ್ನುವುದನ್ನು ಪ್ರಧಾನಿಯವರು ಒಪ್ಪಿಕೊಂಡು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕಾಗಿತ್ತು ಎಂದು ಆಗ್ರಹಿಸಿದ್ದಾರೆ.

ಜಾಗಟೆ ಬಾರಿಸಿ, ದೀಪ ಹಚ್ಚಿ ಕೋವಿಡ್ ಎದುರಿಸಲು ಕರೆನೀಡಿದ ಪ್ರಧಾನ ಮಂತ್ರಿಯವರ ಮೂಢತನದ ಭಾಷಣಗಳೇ ಕೋವಿಡ್ ಸೋಂಕಿನ ಬಗ್ಗೆ ಜನರ ನಿರ್ಲಕ್ಷ್ಯಕ್ಕೆ ಮುಖ್ಯ ಕಾರಣ. ರೋಗವನ್ನು ವೈಜ್ಞಾನಿಕವಾಗಿ ಎದುರಿಸಲು ಕರೆನೀಡಬೇಕಾದ ಪ್ರಧಾನಿ, ಟಿವಿ-ಜ್ಯೋತಿಷಿಗಳ ರೀತಿಯಲ್ಲಿ ಪ್ರವಚನ ನೀಡಿದರೆ ಜನ ಮೂಢಮತಿಗಳಾಗದೆ ಇನ್ನೇನು ಆಗಲು ಸಾಧ್ಯ? ಎಂದು ಕಿಡಿಕಾರಿದ್ದಾರೆ.

ದೇಶದ ಜನತೆಗೆ ಕರ್ತವ್ಯಪಾಲನೆಯ ಪ್ರವಚನ ನೀಡಿದ ಪ್ರಧಾನಿಗಳು ಅದರ ಜೊತಗೆ ಕೋವಿಡ್ ಪರಿಹಾರದ ಇಪ್ಪತ್ತು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಏನಾಯಿತು? ಯಾರಿಗೆ? ಎಷ್ಟು ತಲುಪಿದೆ? ಪಿ.ಎಂ. ಕೇರ್ಸ್ ನಿಧಿಗೆ ಬಂದ ದುಡ್ಡೆಷ್ಟು?  ಕೋವಿಡ್ ನಿಯಂತ್ರಣ ಮತ್ತು ಪರಿಹಾರಕ್ಕಾಗಿ ಆ ನಿಧಿಯಿಂದ ಬಳಕೆಯಾದ ದುಡ್ಡಿನ ಮೊತ್ತವೆಷ್ಟು? ಎಂಬುದನ್ನೂ ತಿಳಿಸಬೇಕಿತ್ತು.

ಕೋವಿಡ್ ಸೋಂಕು ಪ್ರಾರಂಭಗೊಂಡಾಗ ಪ್ರಧಾನಿಯವರು  ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು  ಜೂನ್ ನಲ್ಲಿ ಪ್ರಕಟಿಸಿದ್ದರು. ಅದು ಎಷ್ಟು ಜನರಿಗೆ ತಲುಪಿದೆ? ರಾಜ್ಯದ ಬಿಜೆಪಿ ಸರ್ಕಾರ ಅನ್ನಭಾಗ್ಯದಲ್ಲಿ ನೀಡಲಾಗುತ್ತಿದ್ದ ಅಕ್ಕಿಯನ್ನು ಹತ್ತರಿಂದ ಏಳು ಕಿಲೋಗೆ ಇಳಿಸಿದೆ, ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲು ಹೊರಟಿದೆ.

Advertisement

ಮಿತವ್ಯಯ ಪಾಲನೆ ಮಾಡಿ ಲಭ್ಯ ಇರುವ ಸಂಪನ್ಮೂಲವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಬೇಕಾದ ರಾಜ್ಯದ ಬಿಜೆಪಿ ಸರ್ಕಾರ, ಪರಿಹಾರದ ನೆಪದಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಇದೇನಾದರೂ ಪ್ರಧಾನಿಯವರ ಗಮನಕ್ಕೆ ಬಂದಿದೆಯೇ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next