Advertisement

ಜನಸೇವೆಯೇ ಉಸಿರಾಗಲಿ

10:42 PM May 30, 2019 | Team Udayavani |

ಭಾರತದ ಅಖಂಡ ಶ್ರೇಯೋಭಿವೃದ್ಧಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಟೀಂ ಮೋದಿ, ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಿ. ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಮತ್ತು ವಿಶ್ವಾಸ್‌ ಎನ್ನುವ ನವಭಾರತದ ಕಲ್ಪನೆಯು ಸಾಕಾರವಾಗಲಿ

Advertisement

ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯ ಪಡೆದ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಗುರುವಾರ ಮೋದಿ ಹಾಗೂ ಅವರ ಸಂಪುಟದ ಸಚಿವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಪ್ರಮಾಣ ಬೋಧಿಸಿದರು. ಮೋದಿ ಕ್ಯಾಬಿನೆಟ್‌ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ವಿಚಾರವಾಗಿ ಕೆಲ ದಿನಗಳಿಂದ ತೀವ್ರ ಚರ್ಚೆ ನಡೆದೇ ಇತ್ತು.

ಬುಧವಾರ ಹಾಗೂ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸತತ ಚರ್ಚೆ ನಡೆಸಿದ ಬಳಿಕ ಸಚಿವರ ಅಂತಿಮಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತದೆ. ಈಗ ಯಾರು ಸಚಿವರಾ ಗಲಿದ್ದಾರೆ ಎನ್ನುವುದು ಸ್ಪಷ್ಟವಾಗಿದೆಯಾದರೂ, ಯಾರಿಗೆ ಯಾವ ಖಾತೆ ನೀಡಲಾಗುವುದು ಎಂಬ ಕುತೂಹಲ ವನ್ನಂತೂ ಜೀವಂತವಾಗಿ ಇರಿಸಲಾಗಿದೆ. ಈ ಬಾರಿಯ ಸಚಿವ ಸಂಪುಟವು ಅನುಭವಿ ನಾಯಕರು ಮತ್ತು ಹೊಸ ಚಹರೆಗಳ ಸಮ್ಮಿಶ್ರಣವಾಗಿದ್ದು, ಮುಂದಿನ ಐದು ವರ್ಷಗಳ ಆಡಳಿತದ ನೊಗವನ್ನು ಹೊರುವ ಸಾಮರ್ಥ್ಯ ಆಯ್ಕೆಯಾದವರಲ್ಲೆಲ್ಲ ಕಾಣಿಸುತ್ತಿದೆ.

ಇನ್ನು ಮೋದಿ- ಶಾ ಜೋಡಿ ತಮ್ಮ ಮಿತ್ರಪಕ್ಷಗಳಿಗೂ ಅಸಮಾಧಾನವಾಗದಂತೆ ನೋಡಿಕೊಂಡಿದ್ದಾರೆ. ಬಿಜೆಪಿಯ ಮಿತ್ರಪಕ್ಷಗಳಾದ ಶಿವಸೇನೆ, ಎಐಎಡಿಎಂಕೆ, ಎಲ್‌ಜೆಪಿ, ಅಕಾಲಿದಳ ಮತ್ತು ಅಪ್ನಾದಳದ ನಾಯಕರೂ ಸಂಪುಟದ ಭಾಗವಾಗಿದ್ದಾರೆ. ಇಲ್ಲಿ ಪಕ್ಷಗಳ ಜೊತೆಗೆ ಪ್ರಾದೇಶಿಕ ಸಮತೋಲನವನ್ನೂ ಕಾಯ್ದುಕೊಳ್ಳಲಾಗಿದೆ ಎನ್ನುವುದನ್ನು ಗಮನಿಸಬಹುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈ ಹಿಂದೆ ಮೋದಿ ಮಂತ್ರಿಮಂಡಲದಲ್ಲಿ ಕಾರ್ಯಕ್ರಮ ಅನುಷ್ಠಾನ ಮತ್ತು ಸಾಂಖ್ಯಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಿ.ವಿ. ಸದಾನಂದಗೌಡ ಮತ್ತೆ ಸಚಿವರಾಗುತ್ತಿದ್ದಾರೆ.

ಅಲ್ಲದೇ ಹಿರಿಯ ಮುಖಂಡರಾದ ಸುರೇಶ್‌ ಅಂಗಡಿ ಮತ್ತು ಪ್ರಹ್ಲಾದ್‌ ಜೋಶಿ ಅವರಿಗೂ ಇದೇ ಮೊದಲ ಬಾರಿ ಕೇಂದ್ರ ಸಚಿವರಾಗುವ ಅವಕಾಶ ಸಿಕ್ಕಿದೆ. ಸುಮಾರು ನಾಲ್ಕು ದಶಕಗಳ ನಂತರ ಧಾರವಾಡ ಜಿಲ್ಲೆಗೆ ಕೇಂದ್ರ ಸಚಿ ವ ಸಂಪುಟದಲ್ಲಿ ಸ್ಥಾನ ದೊರೆತಿದೆ. ಅಂತೆಯೇ, ಸುರೇಶ್‌ ಅಂಗಡಿಯವರಿಗೆ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾದ ಮೂರನೇ ಕೇಂದ್ರ ಸಚಿವರ ಗರಿಮೆ ದಕ್ಕಿದೆ. ಕಳೆದ ಬಾರಿ ಕರ್ನಾಟಕದಿಂದ ಅನಂತಕುಮಾರ್‌, ಸದಾನಂದಗೌಡ, ರಮೇಶ್‌ ಜಿಗಜಿಣಗಿ, ಅನಂತ್‌ಕುಮಾರ್‌ ಹೆಗಡೆ, ಸಿದ್ದೇಶ್ವರ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿತ್ತು.

Advertisement

ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ, ಅನಂತಕುಮಾರ್‌ ಅವರ ಅಗಲಿಕೆ ಈ ಬಾರಿ ರಾಜ್ಯವನ್ನು ಕಾಡುತ್ತಿದೆ. ಎಲ್ಲರ ಗಮನವೀಗ ನಾಲ್ಕು ಪ್ರಮುಖ ಇಲಾಖೆಗಳಾದ ಗೃಹಸಚಿವಾಲಯ, ವಿತ್ತಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲ ಯಗಳ ಮೇಲೆ ನೆಟ್ಟಿದೆ. ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ರಾಜನಾಥ್‌ ಸಿಂಗ್‌ ಅವರೇ ಈ ಬಾರಿಯೂ ಈ ಮೆಗಾ ಸಚಿವಾಲಯವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಅದರಂತೆಯೇ, ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್‌ ಅವರೇ ಮುಂದುವರಿ ಯಬಹುದು ಎಂದು ಅಂದಾಜಿಸ ಲಾಗುತ್ತಿದೆ. ಅರುಣ್‌ ಜೇಟ್ಲಿ ಅವರು ಚಿಕಿತ್ಸೆಗಾಗಿ ತೆರಳಿದ್ದಾಗ ವಿತ್ತಸಚಿವಾಲಯದ ನೊಗ ಹೊತ್ತ ಪಿಯೂಶ್‌ ಗೋಯಲ್‌ ಅವರಿಗೂ ಈ ಬಾರಿ ಪ್ರಮುಖ ಖಾತೆ ಸಿಬಹುದು. ಇನ್ನು ಕಳೆದ ಸರ್ಕಾರದಲ್ಲಿ ಆರು ಖಾತೆಗಳನ್ನು ಹೊಂದಿದ್ದ ನಿತಿನ್‌ ಗಡ್ಕರಿಯವರ ಮೇಲಿನಿಂದ ಈ ಬಾರಿ ಹೊರೆ ತಗ್ಗುತ್ತದಾ ನೋಡಬೇಕು.

ಈ ಬಾರಿಯ ಸಂಪುಟದಲ್ಲಿ ಅರುಣ್‌ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್‌ರ ಅನುಪಸ್ಥಿತಿಯನ್ನು ದೊಡ್ಡ ಕೊರತೆ ಎನ್ನಬಹುದು. ಅರುಣ್‌ ಜೇಟ್ಲಿಯವರು ಅನಾರೋಗ್ಯ ಕಾರಣದಿಂದ ಸಚಿವ ಸ್ಥಾನ ಬೇಡವೆಂದು ದೂರ ಸರಿದಿದ್ದಾರೆ, ಅಚ್ಚರಿಯೆಂಬಂತೆ ಸುಷ್ಮಾ ಸ್ವರಾಜ್‌ರ ಹೆಸರೂ ಸಂಭಾವ್ಯರ ಪಟ್ಟಿಯಲ್ಲಿ ಕಾಣಿಸಿದರೂ ಅವರೂ ಸಚಿವ ಸ್ಥಾನದಿಂದ ದೂರವಾಗಿದ್ದಾರೆ. ಮೋದಿ ಸರ್ಕಾರದ ನಂಬರ್‌ ಒನ್‌ ಸಚಿವರಾಗಿ ಗುರುತಿಸಿಕೊಂಡು, ಜನಪ್ರಿಯತೆ ಪಡೆದಿದ್ದ ಸುಷ್ಮಾ ಸ್ವರಾಜ್‌ರ ಜಾಗದಲ್ಲಿ ಬರುವವರ ಮೇಲೂ ಒತ್ತಡವಂತೂ ಇರಲಿದೆ.

ಇನ್ನು ವಿತ್ತ ಸಚಿವಾಲಯಕ್ಕೆ ಅಮಿತ್‌ ಶಾ ಅವರ ಹೆಸರು ತೇಲಿಬರುತ್ತಿದೆಯಾದರೂ, ಅವರಿಲ್ಲದಿದ್ದರೆ, ಗೋಯಲ್‌ ಅವರೇ ಈ ಇಲಾಖೆಯ ಹೊಣೆ ಹೊರಬಹುದು ಎನ್ನಲಾಗುತ್ತಿದೆ. ಈಗ ಆಯ್ಕೆಯಾಗಿ ರುವವರ ವಿಷಯ ದಲ್ಲಿ ಒಂದು ಸಮಾನ ಸಂಗತಿಯಿದೆ. ಇವರೆಲ್ಲ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಎದುರಾಳಿಯನ್ನು ಬೃಹತ್‌ ಅಂತರಗಳಿಂದ ಸೋಲಿಸಿ, ತಮ್ಮ ಕ್ಷಮತೆಯನ್ನು, ಜನಪ್ರಿಯತೆಯನ್ನು ಸಾಬೀತು ಪಡಿಸಿದವರು. ಭಾರತದ ಅಖಂಡ ಶ್ರೇಯೋಭಿವೃದ್ಧಿಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಟೀಂ ಮೋದಿ, ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಿ. ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಮತ್ತು ಸಬ್‌ಕಾ ವಿಶ್ವಾಸ್‌ ಎನ್ನುವ ಮಾತು ಅವರ ಕಾರ್ಯದಲ್ಲಿ ಎದ್ದು ಕಾಣಿಸುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next