ಮೈಸೂರು: ಹಳೆ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಬಿಬಿ ಆಯಿಷಾ ಮಿನಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರನ್ನು ನರಸಿಂಹ ರಾಜ ಕ್ಷೇತ್ರದ ಕೋವಿಡ್-19 ಟಾಸ್ಕ್ ಪೋರ್ಸ್ ಉಸ್ತುವಾರಿ ಹಾಗೂ ಸಂಸದ ಪ್ರತಾಪಸಿಂಹ ಉದ್ಘಾಟಿಸಿದರು.
ಬಿಬಿ ಆಯಿಷಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ 75 ಹಾಸಿಗೆಗಳ ವ್ಯವಸ್ಥೆ ಇದ್ದು, 100 ಹಾಸಿಗೆಗಳಿಗೆ ಹೆಚ್ಚಿಸಿಕೊಳ್ಳಬಹು ದಾಗಿದೆ. ಬೃಂದಾವನ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೋವಿಡ್ ಕೇರ್ ಕೇಂದ್ರ ಆರಂಭಿಸಲಾಗಿದೆ. ಇಂಟೆನ್ಸಿವ್ ಕೇರ್ ಯೂನಿಟ್, ಶಸ್ತ್ರಚಿಕಿತ್ಸೆ, ಹಿಮೋಡ ಯಾಲಿಸಿಸ್, ವೆಂಟಿಲೇಟರ್ ವ್ಯವಸ್ಥೆ ಸೇರಿದಂತೆ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ವ್ಯವಸ್ಥೆಯನ್ನೂ ಆಸ್ಪತ್ರೆಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ಕೇವಲ ಸರ್ಕಾರ, ಅಧಿಕಾರಿಗಳನ್ನು ನೆಪ ಮಾಡದೆ, ಜನಸಾಮಾನ್ಯರೂ ಸಹಕರಿಸಬೇಕು. ಸರ್ಕಾರ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಎಚ್ಚರಿಕೆಗಳನ್ನು ವಹಿಸುತ್ತಿದೆ. ಅದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯ. ಜನರು ಸ್ವಯಂ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಒಬ್ಬರಿಗೆ ಸೋಂಕು ಬಂದರೆ, ಇಡೀ ಕುಟುಂಬ, ಬೀದಿ, ಗ್ರಾಮ, ಸಂಬಂಧಿಕರು, ಜೊತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳು, ಕಚೇರಿಗಳು ಎಲ್ಲರಿಗೂ ತೊಂದರೆಯಾಗುತ್ತದೆ. ಇದರಿಂದ ಜನಜೀವನವೇ ಅಲ್ಲೋಲ ಕಲ್ಲೋಲವಾಗಲಿದೆ. ಆದ್ದರಿಂದ ಪ್ರತಿಯೊಬ್ಬ ನಾಗರೀಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹೊರಗೆ ಅನಗತ್ಯವಾಗಿ ಓಡಾಡಬಾರದು. ಅಗತ್ಯವಿದ್ದಲ್ಲಿ ಕಡ್ಡಾಯ ಮಾಸ್ಕ್ ಹಾಕಬೇಕು. ಸ್ಯಾನಿ ಟೈಸ್ ಬಳಸಬೇಕು. ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿ, ಆದಷ್ಟು ಬೇಗ ಕೋವಿಡ್‌ನಿಂದ ಪಾರಾಗಲು ನಿಮ್ಮೆಲ್ಲ ಸಹಕಾರ ಅಗತ್ಯ ಎಂದು ಮನವಿಒ ಮಾಡಿದರು.
ಈ ವೇಳೆ ಆಸ್ಪತ್ರೆಯ ಅಧ್ಯಕ್ಷ ಇಕ್ಬಾಲ್ ಅಹಮದ್, ಡಾ.ಎಂ.ಆರ್.ಐಯ್ಯಪ್ಪ, ಡಾ.ರವೀಂದ್ರನಾಥ್, ಡಾ.ಜಾವೇದ್ ನಯೀಮ್, ಡಾ.ಮೋಹನ್, ಡಾ.ಇಮ್ರಾನ ಮತ್ತಿತತರು ಉಪಸ್ಥಿತರಿದ್ದರು.