Advertisement

ಪೋಷಕರು ಖಾಸಗಿ ಶಾಲೆ ವ್ಯಾಮೋಹದಿಂದ ಹೊರಬರಲಿ

11:41 AM Jun 11, 2019 | Suhan S |

ಚನ್ನಪಟ್ಟಣ: ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಅಪ್ಪಗೆರೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ನಡೆದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವಂತ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಶೇಷ ಪ್ರತಿಭಾವಂತರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಸೂಕ್ತ ಮಾರ್ಗದರ್ಶನವನ್ನು ಶಿಕ್ಷಣದ ಮೂಲಕ ನೀಡಿದಾಗ ಮಕ್ಕಳು ಉನ್ನತ ಮಟ್ಟಕ್ಕೆ ಸಾಗುತ್ತಾರೆ. ಗ್ರಾಮದ ಜನತೆಯ ಒಡಗೂಡಿ ಶಾಲೆಯ ಭೌತಿಕ ಪರಿಸರವನ್ನು ಉತ್ತಮಪಡಿಸಿಕೊಂಡು ಶಾಲೆಯ ಉನ್ನತಿಗೆ ಶಿಕ್ಷಕರು ಮುಂದಾಗಬೇಕು. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಅವರಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡಬೇಕು ಎಂದರು.

ಉತ್ತಮ ಪರಿಸರ ನಿರ್ಮಿಸಿ: ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್‌ ಮಾತನಾಡಿ, ಪೋಷಕರು ಉತ್ತಮ ಪರಿಸರ ನಿರ್ಮಾಣ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಓದಿದ ಮಕ್ಕಳು ಸತತ ಪ್ರಯತ್ನದ ಮೂಲಕ ಸಾಧನೆಯ ಹಾದಿ ಹಿಡಿದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಶಾಲೆಗೆ ಗೌರವ ತರುವ ಮೂಲಕ ಊರಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು.

ಗುಣಮಟ್ಟದ ಶಿಕ್ಷಣಕ್ಕೆ ಹಲವು ಯೋಜನೆ: ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ವೆಂಕಟಾಚಲಯ್ಯ ಮಾತನಾಡಿ, ಮಕ್ಕಳು ಶಿಸ್ತನ್ನು ಮೈಗೂಡಿಸಿಕೊಂಡಾಗ ಜ್ಞಾನದ ಅರಿವು ವಿಸ್ತಾರಗೊಳ್ಳುತ್ತದೆ. ತಮ್ಮ ಸಾಧನೆಗೆ ಪೂರಕ ವಾತಾವರಣ ಲಭ್ಯವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಕಾಲಕಾಲಕ್ಕೆ ರೂಪಿಸುತ್ತದೆ. ಶಿಕ್ಷಕರ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು ಎಂದರು.

ಪ್ರಾಥಮಿಕ ಶಿಕ್ಷಣ ತಳಪಾಯ: ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಕೆಂಪರಾಜು ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿ ಕ್ಷಣವನ್ನು ಅನುಭವಿಸುವ ಆ ಮೂಲಕ ಜೀವನ ದಾರಿಗೆ ಬೆಳಕಾಗುವ ಪ್ರಾಥಮಿಕ ಶಿಕ್ಷಣ ಮೂಲ ತಳಪಾಯವಾಗಿರುವುದರಿಂದ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದರು.

Advertisement

1ರಿಂದ 8ನೇ ತರಗತಿ ಮಕ್ಕಳಿಗೆ ಪುಸ್ತಕ, ಬ್ಯಾಗ್‌, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕ್ಷೇತ್ರ ಸಮನ್ವಯ ಅಧಿಕಾರಿ ಕುಸುಮಲತಾ ಅವರನ್ನು ಹಿರಿಯ ವಿದ್ಯಾರ್ಥಿಗಳ ಬಳಗದಿಂದ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಯಶೋಧಮ್ಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಜಯರಾಂ ಎ.ಜಿ. ಪ್ರಾಸ್ತಾವಿಕ ನುಡಿಯಾಡಿದರು. ಗ್ರಾಮದ ಮುಖಂಡ ವೆಂಕಟರಮಣಯ್ಯ, ಶಿಕ್ಷಕರಾದ ಮುನಿಯಪ್ಪ, ನಾರಾಯಣ, ಗ್ರಾಪಂ ಸದಸ್ಯರಾದ ವೆಂಟಕರಾಮು, ಲಕ್ಷ್ಮೀ, ಎಸ್‌ಡಿಎಂಸಿ ಅಧ್ಯಕ್ಷೆ ಸುಬ್ಬಲಕ್ಷ್ಮೀ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next