ಬಲೂಚಿಸ್ಥಾನ ದಶಕಗಳಿಂದ ಪಾಕಿಸ್ಥಾನದ ದುರಾಡಳಿತ, ತಾರತಮ್ಯದ ವಿರುದ್ಧ ಪ್ರತಿಭಟಿಸುತ್ತಲೇ ಬಂದ ಪ್ರದೇಶ. ಬಲೂಚಿಯರ ಸಾಮುದಾಯಿಕ, ಜನಾಂಗೀಯ ಗುರುತು, ಸಂಸ್ಕೃತಿಯನ್ನು ನಾಶ ಮಾಡಲು ದಶಕಗಳಿಂದ ಪಾಕ್ ಆಡಳಿತ ಪ್ರಯತ್ನಿಸುತ್ತಲೇ ಸಾಗಿದೆ. ದುರದೃಷ್ಟವಶಾತ್ ಈ ಪ್ರಯತ್ನದಲ್ಲಿ ಅದು ಸಾಕಷ್ಟು ಸಫಲವೂ ಆಗಿದೆ. ಈ ಕಾರಣಕ್ಕಾಗಿಯೇ ಪಾಕಿಸ್ಥಾನದಿಂದ ಮುಕ್ತಿಕೊಡಿಸುವಂತೆ ಬಲೂಚಿಯರು ಭಾರತಕ್ಕೆ ವಿನಂತಿಸುತ್ತಲೇ ಇರುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡ ಪಾಕಿಸ್ಥಾನ ಬಲೂಚಿಯರನ್ನು ಭಾರತ ತನ್ನ ವಿರುದ್ಧ ಎತ್ತಿಕಟ್ಟುತ್ತಿದೆ, ಅವರ ಮೂಲಕ ಉಗ್ರವಾದವನ್ನು ಹರಡುತ್ತಿದೆ ಎಂದು ಆರೋಪಿಸುತ್ತಲೇ ಇರುತ್ತದೆ.
ಒಂದೆಡೆ ಅಲ್ ಕಾಯಿದಾ, ತಾಲಿಬಾನ್, ಹಿಜ್ಬುಲ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳನ್ನು ಪೋಷಿಸುತ್ತ, ಅವುಗಳ ನಾಯಕರಿಗೆ ತನ್ನ ನೆಲೆಯಲ್ಲೇ ಆಶ್ರಯ ನೀಡುವ ಪಾಕಿಸ್ಥಾನ, ಇನ್ನೊಂದೆಡೆ ತನ್ನ ದುರಾಡಳಿತದ ವಿರುದ್ಧ ಧ್ವನಿಯೆತ್ತುವ ಬಲೂಚಿಯರನ್ನು ಉಗ್ರರು ಎಂದು ಕರೆಯುತ್ತದೆ. ಅದರ ಪಾಲಿಗೆ ಉಗ್ರ ದಮನ ಎನ್ನುವುದು ಬಲೂಚಿಸ್ಥಾನದಲ್ಲಿನ ತನ್ನ ವಿರೋಧಿಗಳ ಧ್ವನಿಯನ್ನು ಅಡಗಿಸುವುದೇ ಆಗಿದೆ!
ಇಂಥದ್ದೇ ಮತ್ತೂಂದು ಪ್ರಯತ್ನದ ಭಾಗವಾಗಿ ಪಾಕಿಸ್ಥಾನವೀಗ ಬಲೂಚಿಸ್ತಾನದಲ್ಲಿನ ಡಿ-ರ್ಯಾಡಿಕಲೈಸೇಷನ್(ಮೂಲಭೂತವಾದ ಅಥವಾ ತೀವ್ರಗಾಮಿತ್ವದಿಂದ ಹೊರತರುವುದು) ಕಾರ್ಯಕ್ರಮಕ್ಕೆ ವೇಗಕೊಟ್ಟುಬಿಟ್ಟಿದೆ ಎಂದು ವರದಿಯೊಂದು ಹೇಳುತ್ತಿದೆ. ಪಾಕ್ ವಿರುದ್ಧದ ಚಟುವಟಿಕೆಗಳಿಂದಾಗಿ ಬಂಧನದಲ್ಲಿರುವ ಬಲೂಚಿ ಬಂಡುಕೋರರನ್ನು ಈ ಡಿ ರ್ಯಾಡಿಕಲೈಸೇಷನ್ ಕಾರ್ಯಕ್ರಮದಡಿ, “ಸರಿದಾರಿಗೆ ಅಥವಾ ಮುಖ್ಯವಾಹಿನಿಗೆ’ ತರುವುದು ತನ್ನ ಉದ್ದೇಶ ಎಂದು ಪಾಕಿಸ್ಥಾನ ಹೇಳುತ್ತದೆ. 2018ರಲ್ಲಿ ಲೇ| ಜ| (ನಿವೃತ್ತ)ಜನರಲ್ ಬಾಜ್ವಾ ಈ ತಂತ್ರವನ್ನು ರೂಪಿಸಿದ್ದರು. ಮುಖ್ಯವಾಗಿ ಬಲೂಚಿಯರ ಜನಾಂಗೀಯ ಗುರುತು, ಸಂಸ್ಕೃತಿಯನ್ನು ಅಳಿಸಿಹಾಕುವುದು ಇದರ ಉದ್ದೇಶ ಎನ್ನುವುದು ಸ್ಪಷ್ಟವಾಗುತ್ತದೆ.
ಏಕೆಂದರೆ ಈ ಕಾರ್ಯಕ್ರಮದಡಿಯಲ್ಲಿ ಪಾಕ್ ಸೇನೆ, ಬಂಧನದಲ್ಲಿರುವ ಬಲೂಚಿ ಬಂಡುಕೋರರಿಗೆ ಜಮಾತೆ ಇಸ್ಲಾಮಿಯ ಸ್ಥಳೀಯ ಮುಖ್ಯಸ್ಥನಾದ ಅಬ್ದುಲ್ ಹಕ್ ಹಾಶ್ಮಿಯಿಂದ ಪಾಠ ಹೇಳಿಸುತ್ತಿದೆ! ಹಾಶ್ಮಿ, ಜೆಹಾದ್‌ನ ಪ್ರಬಲ ಪ್ರತಿಪಾದಕ, ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೂ ಈತನಿಗೆ ಬಹಳ ನಂಟಿದೆ ಎನ್ನುತ್ತವೆ ವರದಿಗಳು. ಇಂಥ ವ್ಯಕ್ತಿಯಿಂದ ಬಲೂಚಿಗಳಿಗೆಲ್ಲ ಜೆಹಾದ್‌ನ ಪಾಠ ಮಾಡಿಸಲಾಗುತ್ತಿದೆ. ಒಟ್ಟಿನಲ್ಲಿ ಬಲೂಚ್ ರಾಷ್ಟ್ರೀಯತೆಯ ಧ್ವನಿಗಳನ್ನು ತಗ್ಗಿಸುವುದೇ ಒಟ್ಟಾರೆ ಸಂಚಿನ ಭಾಗ.
ಬಲೂಚಿಸ್ಥಾನದ ವಿಚಾರದಲ್ಲಿ ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಾಕಷ್ಟು ಧ್ವನಿ ಎತ್ತಿದೆಯಾದರೂ, ಈ ಚರ್ಚೆಯನ್ನು ಬೃಹದಾಕಾರಗೊಳಿಸುವ ಅಗತ್ಯವಿದೆ. ಪದೇಪದೆ ಕಾಶ್ಮೀರದ ವಿಚಾರದಲ್ಲಿ ಕಟ್ಟುಕಥೆಗಳನ್ನು ಬೆರೆಸಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾವ ಮಾಡುವ ಪಾಕಿಸ್ಥಾನಕ್ಕೆ ಭಾರತ ಅದರದ್ದೇ ಧ್ವನಿಯಲ್ಲಿ ಉತ್ತರಿಸಬೇಕಿದೆ. ಶಾಂತಿಪ್ರಿಯ ಬಲೂಚಿಯರು ಪಾಕ್‌ನ ಮೂಲಭೂತವಾದಕ್ಕೆ ಯಾವುದೇ ಕಾರಣಕ್ಕೂ ಬಲಿಯಾಗಬಾರದು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಂಡು ಪಾಕ್‌ಗೆ ಕಠಿನ ಎಚ್ಚರಿಕೆ ನೀಡಲೇಬೇಕಿದೆ.