ತುಮಕೂರು: ವಿಪಕ್ಷಗಳ ನಾಯಕರು ಮುಡಾದಲ್ಲಿ ಈ ಹಿಂದೆಯೇ ನಿವೇಶನ ಪಡೆದು ಫಲಾನುಭವಿಗಳಾಗಿದ್ದಾರೆ. ಅವರು ಪಡೆದಿರುವ ನಿವೇಶನಗಳನ್ನು ವಾಪಸ್ ಕೊಟ್ಟು ಅನಂತರ ಮುಖ್ಯಮಂತ್ರಿಗಳ ಬಗ್ಗೆ ಆರೋಪ ಮಾಡಲಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಸವಾಲೆಸೆದರು.
ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ವಿಪಕ್ಷಗಳು ನಿರಂತರವಾಗಿ ಮುಂದುವರಿಸಿದರೆ ಅಹಿಂದ ವರ್ಗಗಳು ಸೇರಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. “ನಾ ಕಳ್ಳ, ಪರರನ್ನು ನಂಬ’ ಎಂಬ ಗಾದೆಯಂತಾಗಿದೆ ವಿಪಕ್ಷದವರ ಆರೋಪ ಎಂದರು.
ನಿವೇಶನ ಹಿಂದಿರುಗಿಸಿ ಪಾದಯಾತ್ರೆ ಮಾಡಲಿ: ಸಚಿವ ರಾಜಣ್ಣ ತಿರುಗೇಟು:
ಬೆಂಗಳೂರು: ಮುಡಾ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ- ಜೆಡಿಎಸ್‌ಗೆ ತಿರುಗೇಟು ಕೊಡಲು ನಿರ್ಧರಿಸಿರುವ ಕಾಂಗ್ರೆಸ್‌ನ ಅಹಿಂದ ನಾಯಕರು ಜಿಲ್ಲಾಮಟ್ಟದಿಂದ ರಾಜ್ಯಮಟ್ಟದವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ “ಉದಯವಾಣಿ’ ಜತೆ ಮಾತನಾಡಿ, ಬಿಜೆಪಿ-ಜೆಡಿಎಸ್‌ನವರು ನಿವೇಶನಗಳನ್ನು ವಾಪಸ್ ಕೊಟ್ಟು ಪಾದಯಾತ್ರೆ ಆರಂಭಿಸಲಿ ಎಂದರು. ಅಹಿಂದದಿಂದ ಆರಂಭಿಕವಾಗಿ ಮುಂದಿನ ವಾರ ತುಮಕೂರು ಜಿಲ್ಲೆಯಲ್ಲಿ ಅಹಿಂದ ಪ್ರತಿಭಟನೆ ನಡೆಯಲಿದೆ. ಅನಂತರ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ ಇಲ್ಲವೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.