Advertisement

ಹಳ್ಳಿಗಳಲ್ಲಿ ಬೆಳೆಯಲಿ ಆಧುನಿಕ ರಂಗಭೂಮಿ; ಶೇಷಗಿರಿಯ ಪ್ರಭು

06:38 PM Mar 31, 2023 | Team Udayavani |

ಹಾವೇರಿ: ನಗರಗಳಿಗಿಂತ ಹಳ್ಳಿಗಳಲ್ಲಿ ಆಧುನಿಕ ರಂಗಭೂಮಿ ಬೆಳೆಯಬೇಕು. ನಾಟಕ ಬದುಕುವುದನ್ನು ಮತ್ತು ಸಂಕುಚಿತ ಪ್ರವೃತ್ತಿಗಳನ್ನು ಮೀರಿ ಸಮಾಜದಲ್ಲಿ ಬೆರೆಯುವುದನ್ನು ಹೇಳಿಕೊಡುತ್ತದೆ ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶೇಷಗಿರಿಯ ಪ್ರಭು ಗುರಪ್ಪನವರ ಹೇಳಿದರು.

Advertisement

ನಗರದ ತೋಟದಯಲ್ಲಾಪುರ ರಸ್ತೆಯಲ್ಲಿರುವ ಮೈಲಾರ ಮಹದೇವ ಸಭಾಭವನದಲ್ಲಿ ಜಿಲ್ಲಾ ಕಲಾ ಬಳಗ ಮತ್ತು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಹವ್ಯಾಸಿ ನಟ ಸಿ.ಎಸ್‌. ಮರಳಿಹಳ್ಳಿ, ಯಕ್ಷ ರಂಗಭೂಮಿಯ ಪ್ರೊ.ಶಮಂತಕುಮಾರ ಕೆ.ಎಸ್‌., ರಂಗ ಸಂಗೀತಕಾರ ಹನುಮಂತಪ್ಪಾ ಕರವಾಳಿ, ಶೇಷಗಿರಿಯ ಯುವ ರಂಗಕರ್ಮಿ ಸಣ್ಣಪ್ಪ ಗೊರವರ ಹಾಗೂ ರಂಗ ಗಾಯನದ ಮಹಾಂತೇಶ ಮರಿಗೂಳಪ್ಪನವರ ಅವರಿಗೆ ಆಕರ್ಷಕ ಫಲಕ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಿ.ಜಿ.ಕೆ. ರಂಗ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ರೊಟ್ಟಿ ಮಾತನಾಡಿ, ಹಳ್ಳಿಗಾಡಿನ ನನ್ನಂಥ ರಂಗಕಲಾವಿದ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲು ರಂಗಭೂಮಿ ಕಾರಣ. ಜೀವನದ ಕನ್ನಡಿಯೇ ರಂಗಭೂಮಿ ಎಂದರು.

ಸಮಾರಂಭದ ಸಂಯೋಜಕ ಹಿರಿಯ ಕಲಾವಿದ ಕೆ.ಆರ್‌. ಹಿರೇಮಠ ಮಾತನಾಡಿ, ಗಡಿ, ಜಾತಿ, ಮತ, ಪಂಥಗಳನ್ನು ಮೀರುವುದನ್ನು ಕಲಿಸುವುದೇ ನಾಟಕ. ಗ್ರಾಮ, ನಗರಗಳ ಭೇದ-ಭಾವ ಅಳಿಸಿ ರಂಗ ಚಿಂತನೆ ಮತ್ತು ಕಲೆಯನ್ನು ಬೆಳೆಸುವ ಅವಕಾಶ ಮಾಡಿಕೊಡುವುದೇ ವಿಶ್ವರಂಗಭೂಮಿ ದಿನಾಚರಣೆಯ ಉದ್ದೇಶ ಎಂದರು.

Advertisement

ಪ್ರಶಸ್ತಿ ಪುರಸ್ಕೃತರ ಪರವಾಗಿ ಸಿ.ಎಸ್‌. ಮರಳಿಹಳ್ಳಿ, ಶಮಂತಕುಮಾರ ಹಾಗೂ ಮರಿಗೂಳಪ್ಪನವರ ಮಾತನಾಡಿದರೆ, ಗಾಯಕ ಹನುಮಂತಪ್ಪ ಕರವಾಳಿ ಹಾಡು ಹಾಡಿ ರಂಜಿಸಿದರು.

ಈ ಸಂದರ್ಭದಲ್ಲಿ ಶಂಕರ ತುಮ್ಮಣ್ಣನವರ ಅವರ ಭೂಕಂಪ ಏಕಾಂಕ ನಾಟಕ ಕುರಿತು ಡಾ. ಮಹಾದೇವಿ ಕಣವಿ ಮಾತನಾಡಿ, ಪರಿಸರ ಜೀತ ಹಾಗೂ ಶೋಷಣೆ ಕುರಿತು ಬರೆದ ಭೂಕಂಪ ಪ್ರಬುದ್ಧ ನಾಟಕ ಎಂದರು. ನಾಟಕಗಳ ಕೊರತೆ ಇರುವ ಈ ದಿನಗಳಲ್ಲಿ ಭೂಕಂಪ ಹೊಸ ನಾಟಕಕಾರರಿಗೆ ಪ್ರೇರಣೆಯಾಗಲಿ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್‌ಎಸ್‌ ಎಸ್‌ ಸಂಯೋಜಕ ಡಾ.ಶಿವಾನಂದ ಪಾಯಮಲ್ಲೆ, ಶೇಷಗಿರಿಯ ಕಲಾವಿದ ಜಮೀರ ಪಠಾಣ, ಈರಣ್ಣ ಬೆಳವಡಿ, ಕಲಾವಿದೆ ಲತಾ ಪಾಟೀಲ, ಶಿವಮೂರ್ತಿ, ಕರಿಯಪ್ಪ ಹಂಚಿನಮನಿ, ಲತಾ ಮರಿಗೂಳಪ್ಪನವರ ಇತರರು ಇದ್ದರು. ನಾಟಕಕಾರ ಶಂಕರ ತುಮ್ಮಣ್ಣ ನವರ ಅವರನ್ನು ಗೌರವಿಸಲಾಯಿತು.ಎನ್‌ಎಸ್‌ಎಸ್‌ ಶಿಬಿರದ ಚಟುವಟಿಕೆಗಳ ಪರಿಚಯವನ್ನು ಶಿಬಿರಾರ್ಥಿ ಆಕಾಶ ಪೂಜಾರ ಮಾಡಿದರು.ಮತ್ತೋಬ್ಬ ಶಿಬಿರಾರ್ಥಿ ಐಶ್ವರ್ಯ ಮಾನೇಗಾರ ವಿಶ್ವ ರಂಗಭೂಮಿ ಸಂದೇಶ ಓದಿದರು. ಪೃಥ್ವಿರಾಜ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಬಡಿಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next