Advertisement

ತಪ್ಪುಗಳು ಸಾಧನೆಗೆ ಮೆಟ್ಟಿಲುಗಳಾಗಲಿ

10:29 PM Nov 24, 2019 | Sriram |

ಜೀವನದಲ್ಲಿ ತಪ್ಪುಗಳು ಮನುಷ್ಯನ ಅನುಭವಗಳನ್ನು ಹೆಚ್ಚಿಸುತ್ತವೆ. ಆ ಅನುಭವಗಳು ಮನುಷ್ಯ ಮಾಡುವ ತಪ್ಪುಗಳನ್ನು ಕಡಿಮೆಗೊಳಿಸುತ್ತವೆ. ಶಾಲೆ- ಕಾಲೇಜುಗಳಲ್ಲಿ ಶಿಕ್ಷಕರು ತಪ್ಪು ಮಾಡಿ ಆದರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ, ಹೊಸ ತಪ್ಪು ಮಾಡಿ ಎನ್ನುತ್ತಾ ಮಕ್ಕಳನ್ನು ತಿದ್ದುವುದು ಸಾಮಾನ್ಯವಾಗಿತ್ತು. ತಪ್ಪುಗಳು ಹೊಸತನ್ನು ಕಲಿಯುವುದಕ್ಕೆ ಒಂದು ದಾರಿ. ಆದರೆ ಅದೇ ತಪ್ಪು ಮತ್ತೆ ಮಾಡಿದರೆ ಆತನಿಗೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ.

Advertisement

ಮನುಷ್ಯ ಕಲಿಯುವುದೇ ತಪ್ಪುಗಳಿಂದ. ಒಂದೊಂದು ತಪ್ಪು ಒಂದೊಂದು ಪಾಠ ನೀಡುತ್ತದೆ. ಮನುಷ್ಯ ನಡೆಯಲು ಕಲಿಯುವುದೇ ತಪ್ಪು ಹೆಜ್ಜೆಗಳಿಂದ. ಆದರೆ ತಪ್ಪುಗಳೇ ಜೀವನವಾಗಬಾರದು. ಅದು ಕಲಿಕೆಗೆ ಮಾರ್ಗವಾಗಬೇಕು. ಸಾಧನೆಗೆ ಮೆಟ್ಟಿಲಾಗಬೇಕು.

ಒಂದೇ ಪ್ರಯತ್ನದಲ್ಲಿ ಗೆದ್ದವರಿಲ್ಲ
ಒಮ್ಮೆ ಇತಿಹಾಸ ಕೆದಕಿದರೆ ಅಲ್ಲಿ ಸಾವಿರಾರು ಸಾಧಕರು ಸಿಗುತ್ತಾರೆ. ಆದರೆ ಒಂದೇ ಪ್ರಯತ್ನದಲ್ಲಿ ಸಾಧನೆ ಮಾಡಿದವರನ್ನು ಹುಡುಕಿದರೆ ಯಾರೂ ಸಿಗುವುದಿಲ್ಲ. ಸಾಧಕರಲ್ಲಿ ಯಾರೂ ಒಂದೇ ಪ್ರಯತ್ನದಲ್ಲಿ ಗೆದ್ದವರಲ್ಲ. ಎಲ್ಲರೂ ತಪ್ಪು ಮಾಡಿ ಮತ್ತೆ ಆ ತಪ್ಪನ್ನು ತಿದ್ದಿಕೊಂಡು ಸಾಧನೆ ಮಾಡಿದವರೇ.

ತಪ್ಪಿನಿಂದ ವಿಮುಖರಾಗದಿರಿ
ಜೀವನದಲ್ಲಿ ತಪ್ಪು ಮಾಡದವರು ಯಾರು ಎಂದು ಕೇಳಿದರೆ ಯಾರೂ ಇಲ್ಲ. ಪ್ರತಿಯೊಬ್ಬರೂ ತಪ್ಪುಗಳಿಂದಲೇ ಪಾಠ ಕಲಿತವರು. ಆದರೆ ತಪ್ಪು ದೊಡ್ಡದಿರಲಿ ಸಣ್ಣದಿರಲಿ ಅದರಿಂದ ಪಾಠ ಕಲಿತು ಮುಂದೆ ಸಾಗಬೇಕೇ ಹೊರತು ವಿಮುಖರಾಗುವುದಲ್ಲ.

ಒಂದೇ ತಪ್ಪಿಗೆ ಹಿಂದಿರುಗದಿರಿ
ನಡೆಯುವ ಒಂದು ಹೆಜ್ಜೆಯಲ್ಲಿ ಎಡವಿದರೆ ಮಗು ನಡೆಯುವುದನ್ನು ನಿಲ್ಲಿಸುವುದಿಲ್ಲ. ಮತ್ತೆ ಎದ್ದು ನಡೆಯುತ್ತದೆ. ಆದರೆ ಮೊದಲು ಮಾಡಿದ ತಪ್ಪನ್ನು ಮತ್ತೆ ಆ ಮಗು ಮಾಡುವುದಿಲ್ಲ. ಅದೇ ರೀತಿ ನಾವು ನಮ್ಮ ಗುರಿಯತ್ತ ಸಾಗುವಾಗ ಒಂದು ತಪ್ಪು ಹೆಜ್ಜೆ ಇಟ್ಟರೂ ಅದನ್ನು ದಾಟಿ ಮುಂದೆ ನಡೆದರಷ್ಟೇ ಗುರಿ ತಲುಪಲು ಸಾಧ್ಯ.

Advertisement

-ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next