Advertisement

ಮಹದಾಯಿಗೆ ಅಧಿಸೂಚನೆಗೆ ಆಗ್ರಹಿಸಲಿ

10:47 AM Jun 20, 2019 | Team Udayavani |

ನರಗುಂದ: ಮಹದಾಯಿ ನ್ಯಾಯಾಧಿಕರಣ ನದಿ ನೀರು ಹಂಚಿಕೆ ಮಾಡಿದ 11 ತಿಂಗಳು ಗತಿಸಿದರೂ ನಮ್ಮ ಪಾಲಿನ ನೀರು ಪಡೆದುಕೊಳ್ಳುವ ಕೆಲಸ ಆಗುತ್ತಿಲ್ಲ. ಇನ್ನಾದರೂ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಸಂಸದರು ಮಹದಾಯಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸುವಲ್ಲಿ ಒತ್ತಾಯಿಸಬೇಕು ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಸದಸ್ಯ ಸಂಗಪ್ಪ ಶಾನವಾಡ ಆಗ್ರಹಿಸಿದರು.

Advertisement

ಮಹದಾಯಿ ಮತ್ತು ಕಳಸಾ-ಬಂಡೂರಿ ಮಲಪ್ರಭೆ ಜೋಡಣೆಗೆ ಆಗ್ರಹಿಸಿ 1434ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ನೂತನವಾಗಿ ಆಯ್ಕೆಯಾದ ಈ ಭಾಗದ ಸಂಸದರು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದರು.

ಪ್ರಥಮಬಾರಿಗೆ ಲೋಕಸಭೆ ಪ್ರವೇಶಿಸಿದ ಸಂಸದೆ ಸುಮಲತಾ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಾವೇರಿ ವಿಷಯ ಪ್ರಸ್ತಾಪಿಸಿ ಆ ಭಾಗದ ಜನರ ಧ್ವನಿಯಾದರು. ಆದರೆ, 4 ವರ್ಷಗಳಿಂದ ಮಹದಾಯಿ ನೀರಿಗಾಗಿ ನಡೆದಿರುವ ಹೋರಾಟದ ಮನವರಿಕೆ ಇದ್ದರೂ ಈ ಭಾಗದ ಯಾವೊಬ್ಬ ಸಂಸದರೂ ಈ ಬಗ್ಗೆ ಪ್ರಸ್ತಾಪ ಮಾಡದಿರುವುದು ಖೇದಕರ ಎಂದು ಹೇಳಿದರು.

ಹೋರಾಟ ಸಮನ್ವಯ ಸಮಿತಿ ಕೋಶಾಧ್ಯಕ್ಷ ಫಕೀರಪ್ಪ ಜೋಗಣ್ಣವರ ಮಾತನಾಡಿ, ಇತ್ತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಸ್‌ ಹೊರಡಿಸಬೇಕಿದೆ ಎಂಬ ಸಬೂಬು ಹೇಳುತ್ತಿದ್ದರೆ ಅತ್ತ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ.ಇನ್ನಾದರೂ ನಾಡಿನ ಸಂಸದರು ಮಹದಾಯಿಗೆ ಸಂಸತ್‌ನಲ್ಲಿ ಧ್ವನಿಯಾಗಲಿ. ಮಹದಾಯಿ ತಾಯಿ ಮಲಪ್ರಭೆಗೆ ಹರಿದು ಬರುವಲ್ಲಿ ತಮ್ಮ ಪಾತ್ರ ನಿರ್ವಹಿಸಲಿ ಎಂದು ಒತ್ತಾಯಿಸಿದರು.

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಯಲ್ಲಪ್ಪ ಗುಡದರಿ, ಲಕ್ಷ ್ಮಣ ಮನೇನಕೊಪ್ಪ, ವೆಂಕಪ್ಪ ಹುಜರತ್ತಿ, ಹನಮಂತಪ್ಪ ಪಡೆಸೂರ, ಮಲ್ಲಪ್ಪ ಐನಾಪೂರ, ವಾಸು ಚವ್ಹಾಣ, ವೆಂಕಟೇಶ ಸಾಬಳೆ, ಈರಣ್ಣ ಗಡಗಿ, ಮಲ್ಲೇಶಪ್ಪ ಬಾಳಿಕಾಯಿ, ಹನಮಂತ ಸರನಾಯ್ಕರ, ಹನಮಂತ ಕೋರಿ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾವಿ, ಮಾಬೂಬಿ ಕೆರೂರ, ಮೆಹಬೂಬಿ ಹವಾಲ್ದಾರ, ಚನ್ನವ್ವ ಕರ್ಜಗಿ, ಬಸಮ್ಮ ಐನಾಪೂರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next