Advertisement

ಎಲ್ಲ ಭಾಷೆಯನ್ನೂ ಪ್ರೀತಿಯಿಂದ ಕಾಣುವ ಗುಣ ಇರಲಿ

01:16 PM Sep 09, 2019 | Suhan S |

ತುಮಕೂರು: ಯಾವುದೇ ಭಾಷೆಯ ಬಗ್ಗೆ ಸಂಕುಚಿತ ಮನೋಭಾವ ಹೊಂದದೆ ಪ್ರೀತಿಯಿಂದ ಕಾಣುವ ಮೂಲಕ ಭಾಷೆ ಉಳಿಸಬೇಕು ಎಂದು ಪಿಎಚ್‌ಡಿ ಪದವೀಧರರಿಗೆ ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಸಲಹೆ ನೀಡಿದರು.

Advertisement

ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ ಕನ್ನಡ ಮಾಧ್ಯಮದಲ್ಲಿ ಪಿಎಚ್‌ಡಿ ಪಡೆದಿರುವ 24 ಮಂದಿಗೆ ಅಭಿನಂದನೆ ಹಾಗೂ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸೌಮ್ಯ ಭಾಷೆ: ಭಾಷೆ ಮುಂದಕ್ಕೆ ಕೊಂಡೊಯ್ಯುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಭಾಷೆ ಬಗ್ಗೆ ಯಾರೂ ಸಂಕುಚಿತ ಮನೋಭಾವ ಹೊಂದಬಾರದು. ಇತರೆ ಭಾಷೆಗಳನ್ನೂ ಪ್ರೀತಿಸಿ, ತಾನೂ ಬೆಳೆಯಬೇಕಿದೆ. ಇತರೆ ಭಾಷೆಗಳಿಗೆ ಹೋಲಿಸಿದಾಗ ಕನ್ನಡ ಸೌಮ್ಯ ಭಾಷೆ. ಮಾತೃಭಾಷೆಯಲ್ಲಿ ಮಾತನಾಡುವುದು ಎಷ್ಟು ಇಷ್ಟ ಎಂಬುದನ್ನು ಲೋಕಸಭೆ ಹಾಗೂ ವಿಶ್ವಸಂಸ್ಥೆಯಲ್ಲಿಯೂ ಕಂಡುಕೊಂಡಿದ್ದೇನೆ. ಬೇರೆಯವರಿಗೆ ಕನ್ನಡ ಭಾಷೆ ಅರ್ಥವಾಗದ ಕಾರಣ ಇಂಗ್ಲಿಷ್‌ನಲ್ಲಿ ಮಾತನಾಡಿದ್ದೇನೆ. ಕನ್ನಡವನ್ನು ಇತರರಿಗೂ ಪರಿಚಯಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಬಿ. ರಮೇಶ್‌, ಪಿಎಚ್‌ಡಿ ಮಾಡಿಕೊಂಡವರಲ್ಲಿ ನಿರಂತರ ಸಂಶೋಧನಾ ಗುಣ ಇರಬೇಕು. ವಿಶ್ಲೇಷಣೆ ಮತ್ತು ಸತ್ಯಾಂಶ ಹೊರತೆಗೆಯುವ ಪ್ರಯತ್ನ ಆಗಬೇಕು ಎಂದರು.

ಸಮಾಜದ ಆರೋಗ್ಯ ಕೆಡುತ್ತಿದೆ: ಕಾರ್ಯದರ್ಶಿ ಸಾ.ಚಿ. ರಾಜಕುಮಾರ ಮಾತನಾಡಿ, ವಿಶ್ವಸಂಸ್ಥೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಚಿಂತನಾ ಮನೋಭಾವ ಉಂಟು ಮಾಡುವ ನಿಟ್ಟಿನಲ್ಲಿ ಸಾಕ್ಷರತಾ ಚಳವಳಿ ಹುಟ್ಟು ಹಾಕಿತು. ಆದರೂ ಸಾಮಾಜಿಕ ಸಮಸ್ಯೆಗಳು ಹಾಗೆಯೇ ಉಳಿದಿವೆ. ಶಿಕ್ಷಣ ಪಡೆದವರು ಸಾಮಾಜಿಕ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ಆದರೆ ಇಂದು ಎಲ್ಲರ ಕೈಗಳಲ್ಲಿಯೂ ಮೊಬೈಲ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಮಗಿಷ್ಟ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಬರವಣಿಗೆ ಅಪಾಯ ತಂದೊಡ್ಡುತ್ತಿವೆ. ಆರೋಗ್ಯಕರ ಮಾಹಿತಿ ನೀಡುವ ಬದಲು ಸಮಾಜದ ಆರೋಗ್ಯ ಕೆಡಿಸುತ್ತಿರುವುದು ಅಪಾಯಕಾರಿ ಎಂದ‌ು ಹೇಳಿದರು.

Advertisement

ಆರ್ಥಿಕ ಸಂಕಷ್ಟದ ಈ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ, ಜಲ ಬಿಕ್ಕಟ್ಟು, ಕೌಟುಂಬಿಕ ಸಮಸ್ಯೆ ತೀವ್ರಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಉದ್ಯೋಗ ದೊರಕಿಸುವ, ಸಾಮಾಜಿಕ ಸ್ವಾಸ್ಥ ್ಯ ಕಾಪಾಡುವ ನೆಲೆಗಟ್ಟಿನಲ್ಲಿ ವಿಸ್ತಾರಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬರಹಗಾರರು ಎಚ್ಚರಿಕೆ ವಹಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಅಕ್ಷರವಂತರಾದವರು ರಾಕ್ಷಸರಾಗುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಹೊಣೆಗಾರಿಕೆ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಕಸಾಪ ತಾಲೂಕು ಅಧ್ಯಕ್ಷೆ ಶೈಲಾ ನಾಗರಾಜ್‌, ರಾಕ್‌ಲೈನ್‌ ರವಿಕುಮಾರ್‌, ಪದಾಧಿಕಾರಿಗಳಾದ ಸಿ.ಎ.ಇಂದಿರಾ, ಮಲ್ಲಿಕಾ ಬಸವರಾಜು, ಅರುಂಧತಿ, ರಾಣಿ ಚಂದ್ರಶೇಖರ್‌, ಮೆಳೆಹಳ್ಳಿ ದೇವರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next