ಭಟ್ಕಳ: ತಾಲೂಕಿನಲ್ಲಿ ಮೊದಲ ಬಾರಿಗೆ ಮೂರು ಶಾಲೆಗಳಿಗೆ ಮಾತ್ರ ಎಲ್.ಕೆ.ಜಿ. ಮತ್ತು ಒಂದನೇ ತರಗತಿ ಪ್ರಾರಂಭಿಸಿದ್ದು ಈ ವ್ಯವಸ್ಥೆಯಲ್ಲಿ ಮೊದಲು ಸ್ಥಳೀಯ ಮಕ್ಕಳಿಗೆ ಆದ್ಯತೆ ನೀಡಬೇಕು ಎಂದು ಕಾಯ್ಕಿಣಿ ಗ್ರಾಪಂನಲ್ಲಿ ನಡೆದ ಒಂದನೇ ಹಂತದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕಾಯ್ಕಿಣಿಯಲ್ಲಿ ನೋಡಲ್ ಅಧಿಕಾರಿ ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಒಂದನೇ ಹಂತದ ಗ್ರಾಮ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಶಿಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಶಿಕ್ಷಕರೊಬ್ಬರು ಇಲಾಖಾ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ತಾಲೂಕಿಗೆ ಕೇವಲ ಮೂರು ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಎಲ್ಕೆಜಿ ಮತ್ತು ಒಂದನೇ ತರಗತಿ ಪಾರಂಭವಾಗಿ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಕೇವಲ ಮೂರು ಶಾಲೆಗಳಲ್ಲಿ ಈ ಯೋಜನೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 30 ಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಲಾಟರಿ ಎತ್ತುವುದರ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದನ್ನು ಕೈಬಿಟ್ಟು ಸ್ಥಳೀಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಕೃಷಿ ಇಲಾಖೆ ಅಧಿಕಾರಿಗಳು ವರದಿ ಮಂಡಿಸಿದ್ದು, ಸಾರ್ವಜನಿಕರು ಗ್ರಾಪಂ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ವಿತರಣೆಯಲ್ಲಿ ತಾರತಮ್ಯವಾಗಿದ್ದು ಈ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದರು. ದೇವಿಕಾನ್ ಕುಡಿಯುವ ನೀರು ಸರಬರಾಜಿನಲ್ಲಿ ವಾಟರ್ ಪೈಪ್ ಅಳವಡಿಸುವ ಸಂದರ್ಭದಲ್ಲಿ ರಸ್ತೆ ಅಕ್ಕಪಕ್ಕದಲ್ಲಿ ನಿರ್ಮಾಣವಾಗಿರುವ ಚರಂಡಿಗಳನ್ನು ಮುಚ್ಚಿ ಹಾಕಲಾಗಿದೆ. ಪರಿಣಾಮವಾಗಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ರಸ್ತೆ ಕೆಟ್ಟು ಹೊಗುತ್ತಿದೆ. ಇದಕ್ಕೆ ಯಾರು ಹೊಣೆಗಾರರು ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಇದು ನಾನು ಇರುವ ಅವಧಿಯಲ್ಲಿ ನಡೆದಿಲ್ಲ. ಈ ಬಗ್ಗೆ ನನಗೆ ಮಾಹಿತಿ ಕೂಡಾ ಇಲ್ಲ ಎನ್ನುವ ಹಾರಿಕೆ ಉತ್ತರ ನೀಡಿದರು.
ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗದೆ ಅಪೂರ್ಣ ಮಾಹಿತಿಯೊಂದಿಗೆ ತಮ್ಮ ಸಿಬಂದಿ ಕಳುಹಿಸಿರುವುದು ಕಂಡು ಬಂತು.
ತಾಪಂ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಜಿಪಂ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.