ಕಲಬುರಗಿ: ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಜಲವೇ ನಮ್ಮೆಲ್ಲರ ಅಮೂಲ್ಯವಾದ ಸಂಪತ್ತು. ಆದ್ದರಿಂದ ಜೀವಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನವಾಗಬೇಕಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ ಎಚ್.ಜಮಾದಾರ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಜಿಲ್ಲಾ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ, ಬಸವೇಶ್ವರ ಸಮಾಜ ಸೇವಾ ಬಳಗ ಸಂಯುಕ್ತವಾಗಿ ಮಂಗಳವಾರ ಕಿರು ಮೃಗಾಲಯದಲ್ಲಿ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕಾರಣಗಳಿಂದ ಜಲ ಸಂಪತ್ತಿನ ಕೊರತೆಯಿಂದ ಪರಿಸರದ ಅಸಮತೋಲನವಾಗುತ್ತಿದೆ. ಜಲ ಸಂರಕ್ಷಣೆ ಸರ್ಕಾರ, ಅರಣ್ಯ, ಜಲ, ನೀರಾವರಿ ಇಲಾಖೆ, ಕೆಲವು ವ್ಯಕ್ತಿ, ಸಂಸ್ಥೆಗಳ ಜವಾಬ್ದಾರಿಯಾಗಿರದೇ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಎಚ್.ಬಿ.ಪಾಟೀಲ, ಜಲಸಂಪತ್ತು ಹಾಳಾಗದಂತೆ ತಡೆದು, ಅದನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕು. ಭೂಮಂಡಲದಲ್ಲಿ ಒಟ್ಟು ಬಳಕೆಗೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆಯಿದೆ. ಮಾನವನ ದುರಾಸೆಯಿಂದ ಇದು ಬರಿದಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ನೀರಿಗಾಗಿ ಮೂರನೇ ವಿಶ್ವಯುದ್ಧ ಜರುಗಿದರೆ ಆಶ್ವರ್ಯಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ್, ಎಸಿಎಫ್ ಸುನೀಲಕುಮಾರ ಜಿ.ಚವ್ಹಾಣ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಎಫ್‌ಒ ಭೀಮರಾಯ ಶಿಳ್ಳೆಕ್ಯಾತ್, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ, ಕಾವಲುಗಾರ ತಾರಾನಾಥ ರಾಠೊಡ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖೀ, ಮಹಾಂತಪ್ಪ ಬಧ್ದೋಲಿ, ಚನ್ನಬಸಪ್ಪ ಗಾರಂಪಳ್ಳಿ, ಸಿದ್ದರಾಮ ತಳವಾರ, ಬಸವರಾಜ ಎಸ್.ಪುರಾಣೆ, ನಾಗರಾಜ ಗುತ್ತೇದಾರ ಮುಂತಾದವರಿದ್ದರು.