ಶಿರಹಟ್ಟಿ: ಕನ್ನಡ ನಾಡು ಕಟ್ಟುವಲ್ಲಿ ಅನೇಕ ಮಹನೀಯರ ಕೊಡುಗೆ ಅಪಾರವಾಗಿದೆ. ಸಾಕಷ್ಟು ಶ್ರೀಮಂತ ಹಾಗೂ ಪ್ರಬುದ್ಧ ಭಾಷೆ ಹೊಂದಿರುವ ಕನ್ನಡ ನಾಡಿನಲ್ಲಿರುವ ಜನತೆಯ ಪರಭಾಷಾ ವ್ಯಾಮೋಹದಿಂದ ಕನ್ನಡತನ ಮಂಕಾಗುತ್ತಿದೆ. ಇದರಿಂದ ಕನ್ನಡಿಗರು ಕನ್ನಡತನ ರೂಢಿಸಿಕೊಂಡು, ಕನ್ನಡ ಭಾಷೆಗಾಗಿ ನಾವೆಲ್ಲ ಒಂದಾಗುವುದು ಅಗತ್ಯವಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಟ್ಟಣದ ಎಸ್.ಎಂ.ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಹೃದಯದಿಂದ ಪ್ರೀತಿಸಿ, ಆಭಿಮಾನದಿಂದ ಬೆಳೆಸುವ ಹಾಗೂ ಸ್ವಾಭಿಮಾನದಿಂದ ಕನ್ನಡ ಮಾತನಾಡುವ ಕನ್ನಡಿಗರು ಉದಯವಾಗಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮೆಲ್ಲ ಮಕ್ಕಳಿಗೆ ಇಂಗ್ಲಿಷ್ ಭಾಷಾ ವ್ಯಾಮೋಹಕ್ಕೆ ನೂಕಿ ಕನ್ನಡ ಮಾಯವಾಗುವಂತೆ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದಾಗಿಸಲು ಅನೇಕರು ಬಹಳಷ್ಟು ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ಸಾರ್ಥಕತೆ ಬರಬೇಕಾದರೆ ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆಯಲ್ಲಿ ಬರಬೇಕು.ಅಲ್ಲದೇ, ಶೀಘ್ರದಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂತರ ತಹಶೀಲ್ದಾರ್ ಕಲಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ನಾಡು, ನುಡಿ ನಮ್ಮತನ ಬೆಳೆಸಿಕೊಂಡಾಗ ಮಾತ್ರ ಉಳಿಯಲು ಸಾಧ್ಯ. ಕನ್ನಡದ ಡಿಂಡಿಮ ಮೊಳಗಬೇಕಿದೆ. ಕನ್ನಡನಾಡು ಕವಿಗಳ ನಾಡು. ಕಲೆಗಳ ಬೀಡು. ಕಾವ್ಯಗಳ ನಾಡು. 2 ಸಾವಿರ ವರ್ಷಗಳ ಪರಂಪರೆ ಹೊಂದಿರುವ ಹೆಮ್ಮಯ ನಾಡು ನಮ್ಮದು. ಇಂತಹ ನಾಡನ್ನು ನಾವೆಲ್ಲ ಸೇರಿ ಬೆಳೆಸಿಕೊಳ್ಳಲು ಮುಂದಾಗಬೇಕೆಂದರು.
ಕೆ.ಎ.ಬಳಿಗೇರ ಅವರು ಉಪನ್ಯಾಸ ನೀಡಿದರು. ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿತು. ಕನ್ನಡ ಭಾಷೆಗಾಗಿ ದುಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಗಂಗವ್ವ ಆಲೂರ, ಸದಸ್ಯರಾದ ದೀಪು ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ,ಹೊನ್ನಪ್ಪ ಶಿರಹಟ್ಟಿ, ಎಸ್ .ಬಿ.ಹೊಸೂರ, ಸಿಪಿಐ ವಿಕಾಸ ಲಮಾಣಿ, ತಾಪಂ ಇಒ ನಾರಾಯಣ ಎಸ್., ಬಿಇಒ ಜಿ.ಎಂ. ಮುಂದಿನಮನಿ, ಎಸ್.ಬಿ.ಹರ್ತಿ, ಎಂ.ಕೆ. ಲಮಾಣಿ, ರಾಜು ಶಿರಹಟ್ಟಿ, ಬಸವರಾಜ ವಡವಿ, ದೇವೇಂದ್ರ ಶಿಂಧೆ, ಮಾಬುಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.