ಚಿಂಚೋಳಿ: ಬಂಜಾರಾ ಸಮಾಜವನ್ನು ಪರಿಶಿಷ್ಟ ಜಾತಿಯಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿಲ್ಲ, ಆದರೆ ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಸಮಾಜದಲ್ಲಿ ಒಡಕು ಮತ್ತು ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಈ ಕುರಿತು ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಬಹಿರಂಗ ಚರ್ಚೆ ನಡೆಸೋಣ ಎಂದು ತಾಲೂಕು ಬಂಜಾರಾ ಸಮಾಜದ ಮುಖಂಡ ಶಾಮರಾವ್ ರಾಠೊಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರಾ ಸಮಾಜದಲ್ಲಿ ಗೊಂದಲ ಮೂಡಿಸಲು ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಸಕ್ಕರೆ ಕಾರ್ಖಾನೆ, ವಿಮಾನ ನಿಲ್ದಾಣ ಪ್ರಾರಂಭದ ಕುರಿತು ಕಲಬುರಗಿ ಸಂಸದರು ನೀಡಿದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಕಾಂಗ್ರೆಸ್ ಮುಖಂಡರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಬಂಜಾರಾ ಮುಖಂಡ ಅಶೋಕ ಚವ್ಹಾಣ ಮಾತನಾಡಿ, ಬಂಜಾರಾ ಸಮಾಜದ ವತಿಯಿಂದ ವೇದಿಕೆ ಏರ್ಪಡಿಸಲಾಗುವುದು. ಅದರಲ್ಲಿ ಕಲಬುರಗಿ ಸಂಸದರು, ಶಾಸಕರು, ಕಾಂಗ್ರೆಸ್ ಮುಖಂಡರು ಬಂದು ಬಹಿರಂಗ ಚರ್ಚೆ ನಡೆಸಲಿ. ಗೊಂದಲದ ವಾತಾವರಣ ತಿಳಿಗೊಳಿಸಲಿ ಎಂದು ಹೇಳಿದರು.
ಕೋಲಿ ಸಮಾಜದ ಮುಖಂಡ ಲಕ್ಷ್ಮಣ ಆವಂಟಿ ಮಾತನಾಡಿ, ಕೋಲಿ ಸಮಾಜಕ್ಕೆ ನ್ಯಾಯ ಕೊಡಿಸುವುದಕ್ಕಾಗಿ ಲೋಕಸಭೆ ಅಧಿ ವೇಶನದಲ್ಲಿ ಎರಡು ಸಲ ವಿಷಯ ಪ್ರಸ್ತಾಪಿಸಿದ್ದಾರೆ. ಸಂಸದರಿಂದ ಸಮಾಜಕ್ಕೆ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಮುಖಂಡರಾದ ಭೀಮಶೆಟ್ಟಿ ಮುರುಡಾ, ಶ್ರೀಮಂತ ಕಟ್ಟಿಮನಿ, ಗೌರಿಶಂಕರ ಉಪ್ಪಿನ, ರಾಜು ಪವಾರ, ಶಂಕರ ರಾಠೊಡ, ಹಣಮಂತ ಭೋವಿ, ಗುಂಡಪ್ಪ ಅವರಾದಿ, ಪವನ ಕುಮಾರ, ರವಿನಾಯಕ, ಬಂಡಾರೆಡ್ಡಿ ಇನ್ನಿತರರು ಇದ್ದರು.