Advertisement

ಅನುದಾನ ಪೂರ್ಣ ಬಳಕೆಯಾಗಲಿ

12:26 PM Feb 12, 2020 | Suhan S |

ಬೆಳಗಾವಿ: ಬಾಕಿ ಉಳಿದಿರುವ ಅನುದಾನವನ್ನು ಮಾರ್ಚ್‌ ಅಂತ್ಯದೊಳಗೆ ಖರ್ಚು ಮಾಡಬೇಕು. ಅಭಿವೃದ್ಧಿ ಕೆಲಸಕ್ಕೆ ಬಂದಿರುವ ಅನುದಾನ ಯಾವುದೇ ಕಾರಣಕ್ಕೂ ಹಿಂದಿರುಗಿ ಹೋಗದಂತೆ ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಎಂದು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಸಿಇಒ ಡಾ| ರಾಜೇಂದ್ರ ಕೆ.ವಿ. ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಾಮಗಾರಿಗಳ ಅನುಷ್ಠಾನಕ್ಕೆ ಮಾರ್ಚ್ ವರೆಗೆ ಕಾಯದೇ ತಮ್ಮ ಇಲಾಖೆಯಲ್ಲಿ ಬಾಕಿ ಉಳಿದಿರುವ ಅನುದಾನ ಖರ್ಚು ಮಾಡಲು ತಕ್ಷಣವೇ ಪ್ರಸ್ತಾವನೆ ಕಳುಹಿಸಿಕೊಡುವಂತೆ ತಿಳಿಸಿದರು.

ಮಾರ್ಚ್‌ ಅಂತ್ಯದಲ್ಲಿ ಬಂದು ಕ್ರಿಯಾಯೋಜನೆ ತಿದ್ದುಪಡಿಗೆ ದುಂಬಾಲು ಬಿಳಬಾರದು. ಅಭಿವೃದ್ಧಿ ಕೆಲಸಕ್ಕೆ ಬಂದಿರುವ ಯಾವುದೇ ಅನುದಾನ ಮರಳಿ ಹೋಗಬಾರದು. ಜಿಲ್ಲಾ ಪಂಚಾಯತಿಗೆ ಒಳಪಡುವ ಕೆರೆಗಳಿಗೆ ಒಂದು ವಾರದಲ್ಲಿ ಭೇಟಿ ನೀಡಿ ದುರಸ್ತಿ ಕೆಲಸ ಕೈಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿ, ಫಲಾನುಭವಿಗಳ ತಲುಪಬೇಕಾದ ಸೌಲಭ್ಯ ಅಥವಾ ಅನುದಾನ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ವಿತರಣೆ ಮಾಡಿರುವ ಪಂಪ್‌ ಸೆಟ್‌ಗಳ ಗುಣಮಟ್ಟದ ಬಗ್ಗೆ ರೈತರಿಂದ ದೂರುಗಳು ಬರುತ್ತಿವೆ. ಈ ಕುರಿತು ಪರಿಶೀಲನೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಪಂ ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ರಾಜೇಂದ್ರ, ಅಂತಹ ಯಾವುದೇ ವಿಷಯಗಳು ಇದ್ದರೆ ಯಾವ ಅಧಿಕಾರಿ ಬೇಜವಾಬ್ದಾರಿತನ ತೋರಿಸಿರುತ್ತಾರೋ ಅಂತಹ ಅಧಿಕಾರಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.  ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಬಿಪಿಎಲ್‌ ಕಾರ್ಡ್‌ ಹೊಂದಿರುವ ಜನರಿಗೆ ಮಾರಣಾಂತಿಕ ಕಾಯಿಲೆಗಳು ಬಂದರೆ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿಮೊದಲು ಬಂದವರಿಗೆ ಮೊದಲ ಆದ್ಯತೆ ಮೂಲಕ ಯೋಜನೆಯ ಲಾಭವನ್ನು ಪಡೆಯಲು ಅವಕಾಶವಿದೆ. ಬಿ.ಪಿ.ಎಲ್‌. ಕಾರ್ಡುದಾರರಿಗೆ ತೊಂದರೆಯಾದರೆ ಆಸ್ಪತ್ರೆಯಲ್ಲಿ ಸರ್ಕಾರಿ ಯೋಜನೆಗಳನ್ನು ತಿಳಿಸುವ ಹೆಲ್ಪ್ ಡೆಸ್ಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ದೇವರಾಜ್‌ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಹಂಚಿಕೆಯಾದ ಅನುದಾನ ಸೇರಿದಂತೆ ನೀರಾವರಿ, ಹೆಸ್ಕಾಂ, ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next