Advertisement

ಕಲಾವಿದರ ಉಳಿವಿಗೆ ಸರ್ಕಾರ ಯೋಜನೆ ರೂಪಿಸಲಿ

03:56 PM Mar 23, 2022 | Team Udayavani |

ರಾಮದುರ್ಗ: ಜಾನಪದ ಕಲಾವಿದರು ಕಲೆಯಲ್ಲಿ ಬಹಳಷ್ಟು ಶ್ರೀಮಂತರು. ಆದರೆ ವಾಸ್ತವದಲ್ಲಿ ಅವರ ಬದುಕು ದಯನೀಯ ಸ್ಥಿತಿಯಲ್ಲಿದೆ. ಕಲಾವಿದರ ಉಳಿವಿಗಾಗಿ ಸರಕಾರಗಳು ಯೋಜನೆ ರೂಪಿಸದ ಪರಿಣಾಮ ಎಷ್ಟೋ ಕಲೆಗಳು ಅಳುವಿನ ಅಂಚಿಗೆ ಬಂದು ತಲುಪಿವೆ ಎಂದು ಹಂಪಿ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿ ಡಾ| ಮಲ್ಲಿಕಾ ಘಂಟಿ ವಿಷಾದ ವ್ಯಕ್ತಪಡಿಸಿದರು.

Advertisement

ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿ ನಡೆಯುತ್ತಿರುವ 3 ದಿನಗಳ ರಾಜ್ಯ ಮಟ್ಟದ ಜಾನಪದ ಮಹಾಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಬದುಕನ್ನು ಸುಧಾರಿಸಲು ಕೇವಲ ಸರಕಾರ ಅಷ್ಟೇ ಅಲ್ಲ, ಸಮಾಜವೂ ಚಿಂತನೆ ಮಾಡಬೇಕಾಗಿದೆ. ಕಲಾವಿದ ಉಳಿದರೆ ಕಲೆ ಉಳಿಯಲು ಸಾಧ್ಯ ಎಂದು ಹೇಳಿದರು.

ಹಳ್ಳಿಗಳಲ್ಲಿ ಚೌಡಿಕೆ ಪದಗಳಗನ್ನು ಒಂದು ಸಮುದಾಯಕ್ಕೆ ಮೀಸಲಿಡಲಾಗಿದೆ. ಅವುಗಳು ಜಾತಿ ಸೂಚಿಕ ಪರಿಕರಗಳಲ್ಲ, ಸಂಗೀತದ ಪರಿಕರಗಳು ಎಂಬುದನ್ನು ತಾವು ಪ್ರತಿಪಾದಿಸಿರುವುದಾಗಿ ತಿಳಿಸಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಗೇರಿ ಮಾತನಾಡಿ, ಸಂಸðತಿಯಿಂದ ಸಂಸ್ಕಾರ, ನಾಗರೀಕತೆ ಉಳಿಯುತ್ತದೆ. ನಾಗರೀಕತೆಯಿಂದ ಈ ಜಗತ್ತಿನಲ್ಲಿ ಮಾನವ ಕುಲ ನೆಮ್ಮದಿಯಿಂದ ಬದುಕಲು ಸಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಮಾನವನ ಹುಟ್ಟಿನಿಂದ ಅಂತ್ಯದ ವರೆಗೂ ಹಾಸುಹೊಕ್ಕಾದ ಜಾನಪದ ಕಲೆಯನ್ನು ತಾಲೂಕಿನಲ್ಲಿ ಉಳಿಸಿ ಬೆಳೆಸುವಲ್ಲಿ ಸಿದ್ದು ಮೋಟೆ ಅವರ ಕೊಡುಗೆ ಅಪಾರ ಎಂದು ಹೇಳಿದರು.

Advertisement

ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ| ರಾಮು ಮೂಲಗಿ ಮಾತನಾಡಿದರು. ತೊರಗಲ್ಲ ಗಚ್ಚಿನ ಹಿರೇಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ಜಾನಪದ ಕಲಾವಿದ ಸಿದ್ದು ಮೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿದ್ದಪ್ಪ ಬಿದರಿ, ಮಲ್ಲಯ್ಯ ತೋಟಗಂಟಿ, ಜುಲಿಯಾನಾ ಫರ್ನಾಂಡೀಸ್‌, ಹನಮಂತ ಬರಗಾಲ, ಮಲ್ಲಪ್ಪ ದಡ್ಡೆನ್ನವರ ಅವರಿಗೆ ಜಾನಪದ ಶಿವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಮತ್ತು ಕಲಾ ಪ್ರೋತ್ಸಾಹಿಗಳನ್ನು ಸತ್ಕರಿಸಲಾಯಿತು. ಮೆರವಣಿಗೆಯಲ್ಲಿ ಕುಂಭಹೊತ್ತ 24 ಮಹಿಳಾ ವಿಧವೆಯರಿಗೆ ವೇದಿಕೆಯಲ್ಲಿ ಓಂ ಶಿವ ಮೇಳದ ವತಿಯಿಂದ ಸೀರೆ ವಿತರಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ 20 ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ತಮ್ಮ ಕಲೆ ಪ್ರದರ್ಶಿಸಿ, ಮನರಂಜಿಸಿದರು. ಶಿಕ್ಷಕ ಮಾರುತಿ ಜಂಗವಾಡ ನಿರೂಪಿಸಿದರು. ಎಂ.ಎನ್‌. ಗವನ್ನವರ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next