Advertisement
ಬದುಕು ಋಣಭಾರದಿಂದ ಬಿಡುಗಡೆಯನ್ನು ಸದಾ ಬೇಡುತ್ತದೆ. ಸಮಾಜಮುಖಿ ಕೆಲಸ ಗಳಲ್ಲಿಯೇ ಮನುಷ್ಯತ್ವದ ನೆಲೆ ಗಟ್ಟಿಗೊಳ್ಳಬೇಕು. ನಮಗೆಲ್ಲ ಅನ್ನ, ಅರಿವು, ನೆರಳನ್ನು ನೀಡಿ ಪೊರೆವ ಸಮಾಜದ ಋಣಸಂದಾಯವು ನಮ್ಮೊಟ್ಟಿಗೇ ಸಾಗಬೇಕು. ನಿಸ್ವಾರ್ಥ ಸೇವೆಯಲ್ಲಿಯೇ ದೈವತ್ವವನ್ನೂ, ಮೋಕ್ಷವನ್ನೂ ಹುಡುಕಿ ಕೊಳ್ಳಬೇಕು. ಸೇವೆಯು ತನ್ನನ್ನು ತಾನು ಋಣಮುಕ್ತ ಗೊಳಿಸಿಕೊಳ್ಳಲು ಸಾಗಬೇಕಾದ ದಾರಿಯೇ ಹೊರತು ಉಪ ಕಾರವೆಂದು ಅದನ್ನು ಭ್ರಮಿಸಬಾರದು. ಆಧುನಿಕತೆಯ ಭರಾಟೆಯಲ್ಲಿ ದಿನೇದಿನೆ ಯಾಂತ್ರೀಕೃತಗೊಳ್ಳುತ್ತಿರುವ ಜಗತ್ತು ಆಶಕ್ತರು, ಅವಕಾಶವಂಚಿತರನ್ನು ತನಗರಿವಿಲ್ಲದಂತೆ ತುಳಿದುಕೊಂಡೇ ನಡೆಯುತ್ತಿರುತ್ತದೆ. ಕಾಣದ ಗಮ್ಯದೆಡೆಗೆ ಧಾವಂತದ ಹಾದಿಯಲ್ಲಿ ಪರಸೇವೆಯೆಂಬ ಸಾವಧಾನದ ತಂಗುದಾಣಗಳ ಅಗತ್ಯವಿರುತ್ತದೆ. ಒಳಗಿನ ಪ್ರೀತಿ-ಅಂತಃಕರಣಗಳ ಪಸೆಯಾರದಂತೆ ಬದುಕುವ ಸಲುವಾಗಿ, ಮತ್ತಷ್ಟು ಮನುಷ್ಯರಾಗಿ ಉಳಿಯುವ ಸಲುವಾಗಿ.ಕೆರೆಯ ನೀರನ್ನು ಕೆರೆಗೆ ಚೆಲ್ಲಿ.. ಎಂಬಂತೆ, ದುಡಿಮೆಯ ಒಂದಂಶವನ್ನು ಸಮಾಜದ ಒಳಿತಿಗೆ, ಸಹವರ್ತಿಗಳ ಏಳ್ಗೆಗೆ ಮೀಸಲಿಡುವ ಮೂಲಕ ನಮಗೆಲ್ಲ ಬದುಕಿನ ಮೌಲ್ಯವನ್ನು ಉನ್ನತೀಕರಿಸಲು ಸಾಧ್ಯ. ಹಾಗೆ ನೋಡಿದರೆ ನಿರುಪದ್ರವಿಗಳಾಗಿ ನಿರಾಡಂಬರದ ಬದುಕು ಸಾಗಿಸುವ ಇತರ ಪರಿಸರಸ್ನೇಹಿ ಜೀವಜಂತುಗಳಿಗಿಂತ ಮನುಷ್ಯನಿಗೇ ಹೆಚ್ಚು ಋಣಭಾರವಿದೆ. ಪ್ರೀತಿ, ತ್ಯಾಗ ಮತ್ತು ಋಣಸಂದಾಯದ ಮಾದರಿಯಿಂದಷ್ಟೇ ಮನುಷ್ಯ ಭೂಗ್ರಹದಲ್ಲಿ ವಿಭಿನ್ನನೂ ಅನನ್ಯನೂ ಆಗಿದ್ದಾನೆ. ಅದೇ ಕಾರಣಕ್ಕೆ ಮನುಷ್ಯನಿಗೆ ಸುಮಾರು ಎಂಟು ಮಿಲಿಯನ್‌ಗಳಷ್ಟಿರುವ ಜೀವಿಪ್ರಭೇದಗಳಲ್ಲಿ ಉನ್ನತ ಸ್ಥಾನವಿದೆಯೇ ಹೊರತು ಕೇವಲ ಮೆದುಳು ಬಲದಿಂದಲ್ಲ. ಗಾಂಧೀಜಿಯವರು ಹೇಳಿದಂತೆ “ಇತರರ ಸೇವೆಯಲ್ಲಿ ಕಳೆದುಹೋಗುವುದೇ ನಮ್ಮನ್ನು ನಾವು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗ’. ಈವಂಗೆ ದೇವಂಗೆ ಆವುದಂತರವಯ್ಯ.. ಎಂಬುದನ್ನರಿತು ನೀಡುವ ನಿಸ್ಪೃಹ ಹೃದಯದಲ್ಲಿ ದೇವರು ನೆಲೆಸಿರುತ್ತಾನೆ ಅಂತ ಭಾವಿಸುವುದೇ ಹೆಚ್ಚು ಸರಿ.
Related Articles
Advertisement
ಗೀತೆಯಲ್ಲಿ ಕರ್ಮಣ್ಯೇ ವಾದಿಕಾರಸ್ತೇ ಮಾ ಫಲೇಷು ಕದಾಚನ.. ಎಂದಿದೆ. ಲಾಭದಾಸೆ, ಪ್ರತಿಫಲಾಪೇಕ್ಷೆ, ಕೀರ್ತಿಯಾ ಸೆಗಳನ್ನು ಮರೆತು ಕೆಮರಾಗಳನ್ನು ಮನೆಯಲ್ಲೇ ಬಿಟ್ಟು ಮಾಡುವ ಸೇವೆಯು ಹೆಚ್ಚು ಮೌಲ್ಯಯುತ. ಲಾಭದಾಸೆ ಮುಗಿಯುವಲ್ಲಿಂದಲೇ ಮನುಷತ್ವದ ಆರಂಭ. ಕರ್ಮಕ್ಕಾಗಿ ಕರ್ಮ ಮಾಡುವ ಮಹನೀಯನನ್ನು ಕಾಣಲು, ನಾನು ಬೇಕಾದರೆ ನಾನು ನನ್ನ ಮೊಣಕೈ, ಮೊಣಕಾಲುಗಳ ಮೇಲೆ ಇಪ್ಪತ್ತು ಮೈಲಿ ನಡೆಯಲು ಸಿದ್ಧನಿದ್ದೇನೆ ಎಂಬ ಸ್ವಾಮಿ ವಿವೇಕಾನಂದರ ಮಾತೇ ನಿಸ್ವಾರ್ಥ ಕರ್ಮದ ಅಭಾವವನ್ನು ಸೂಚಿಸುತ್ತದೆ!. ಸಮಾಜಸೇವೆಯೂ ಹೂಡಿಕೆಯಂತೆ ಒಂದು ದಂಧೆಯಂತಾಗಿರುವ ಹೊತ್ತಿನಲ್ಲಿ ಕೊಡುಗೆಗಳನ್ನು ಪ್ರಚಾರತಂತ್ರ ಗಳಾಗಿ ಬಳಸಿಕೊಳ್ಳುವ ಸ್ವಾರ್ಥಸಾಧಕರಿಗಿಲ್ಲಿ ಬರವಿಲ್ಲ.
ನೆನಪಿಡಬೇಕಾದ್ದು, ಜಗವ ಬೆಳಗುವ ನೇಸರ, ಇಳೆಗೆ ಜೀವಕಳೆ ತರುವ ಮಳೆ, ತನ್ನ ಪಾತ್ರದುದ್ದಕ್ಕೂ ಹಸುರುಕ್ಕಿಸಿ ಹರಿಯುವ ನದಿ, ಸುತ್ತ ಸುಳಿದಾಡಿ ಜೀವಾನಿಲ ಸೂಸುವ ಗಾಳಿ, ಹಣ್ಣು-ನೆರಳು ನೀಡಿ ಜೀವ ಪೊರೆವ ಮರಗಿಡಗಳೆಂದಿಗೂ ಸ್ವಾರ್ಥಕ್ಕಾಗಿ ಅಸ್ತಿತ್ವದಲ್ಲಿರಲ್ಲ, ಪರಹಿತಕ್ಕಷ್ಟೇ.
–ಸತೀಶ್ ಜಿ.ಕೆ.,ತೀರ್ಥಹಳ್ಳಿ