Advertisement

ಭ್ರೂಣ ಹತ್ಯೆ ತಡೆಗೆ ಪ್ರತಿಯೊಬ್ಬರೂ ಶ್ರಮಿಸಲಿ

02:23 PM Mar 31, 2022 | Team Udayavani |

ದಾವಣಗೆರೆ: ಶಿಕ್ಷಾರ್ಹ ಅಪರಾಧವಾಗಿರುವ ಭ್ರೂಣ ಲಿಂಗ ಪತ್ತೆ ಮಾಡದಂತೆ ಎಷ್ಟು ಜಾಗೃತಿ, ತಿಳಿವಳಿಕೆ ನೀಡಿದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬೇಸರ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಭ್ರೂಣ ಲಿಂಗ ಪತ್ತೆ ಮಾಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹೆಚ್ಚೆಚ್ಚು ಕಾರ್ಯಾಗಾರ ಮಾಡಬೇಕಾಗಿದೆ. ಯಾವುದೇ ಕಾಯ್ದೆಗಳಿಗೆ ಹೆದರುವುದಕ್ಕಿಂತ ನಮ್ಮ ಮನಃಸಾಕ್ಷಿ ಒಪ್ಪುವಂತೆ ನಡೆದುಕೊಂಡರೆ ಹೆಣ್ಣು ಶಿಶುಗಳನ್ನು ಉಳಿಸಲು ಸಾಧ್ಯ ಎಂದರು.

ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾರೆ ಎಂದು ನಮ್ಮ ಪುರಾಣ, ವೇದ, ಉಪನಿಷತ್ತುಗಳಲ್ಲಿ ಉಲ್ಲೇಖೀಸಲಾಗಿದೆ. ಆದರೆ ಪುರುಷ ಪ್ರಧಾನ ವ್ಯವಸ್ಥೆ ಜಾರಿಯಲ್ಲಿದೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಹೆಚ್ಚುತ್ತಿವೆ. ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಕಾಯ್ದೆ ಜಾರಿಯಲ್ಲಿದ್ದರೂ ಸಹ ಭ್ರೂಣ ಹತ್ಯೆ ಮತ್ತು ಲಿಂಗಪತ್ತೆ ಮಾಡುವ ಚಟುವಟಿಕೆಗಳು ನಡೆಯುತ್ತಿವೆ. ಬಹಳಷ್ಟು ತಿಳಿದವರು, ಹಣವಂತರೇ ಕಾಯ್ದೆಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಆರ್‌.ಬಿ. ಬಸರಗಿ ಮಾತನಾಡಿ, ಲಿಂಗಾನುಪಾತದಲ್ಲಿ ಸಮತೋಲನ ಪಾಲಿಸುವುದು ಆದ್ಯ ಕರ್ತವ್ಯ. ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಚಿಹ್ನೆ, ಸನ್ನೆಗಳ ಮೂಲಕ ಲಿಂಗ ಪತ್ತೆ ಮಾಡುವುದು ಕಂಡು ಬಂದಲ್ಲಿ ಪೊಲೀಸ್‌ ಇಲಾಖೆಯ ಗಮನಕ್ಕೆ ತರಬೇಕು. ಅಕ್ರಮವಾಗಿ ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆಯಂತಹ ಕಾನೂನುಬಾಹಿರ ಚಟುವಟಿಕೆ ಮಾಡುವ ಸೆಂಟರ್‌ ಗಳನ್ನು ಸೀಜ್‌ ಮಾಡುವುದರ ಜೊತೆಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಮಾತನಾಡಿ, ಯಾವುದೇ ಜೀವವನ್ನು ಹತ್ಯೆ ಮಾಡುವುದು ಅತ್ಯಂತ ಪಾಪದ ಕೆಲಸ. ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆ ಮಾಡುವಂತಹ ಅಮಾನವೀಯ ಕೃತ್ಯ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ವಿಶೇಷವಾಗಿ ಆಶಾ ಕಾರ್ಯಕರ್ತೆಯರಿಗೆ ಕಾರ್ಯ ನಿರ್ವಹಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಗರ್ಭಿಣಿಯರ ಸಂಪೂರ್ಣ ಮಾಹಿತಿ ಇರುತ್ತದೆ. ಹೆರಿಗೆ ಆಗುವವರೆಗೂ ಅವರ ಕುರಿತು ಮಾಹಿತಿ ಪಡೆಯುತ್ತಿರಬೇಕು. ಕಾನೂನು ಬಾಹಿರ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವವರ ಕುರಿತು ಮಾಹಿತಿ ದೊರೆತರೆ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಸಮಿತಿಗೆ ತಿಳಿಸಬೇಕು ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಎಲ್ಲರೂ ಶ್ರಮಿಸೋಣ ಎಂದರು.

Advertisement

ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎಚ್‌. ವಿಜಯಕುಮಾರ್‌, ಡಾ| ಎ.ಎಂ. ರೇಣುಕಾರಾಧ್ಯ, ಡಾ| ಎಸ್‌. ಮೀನಾಕ್ಷಿ, ಡಾ| ಶಂಕರ ಗೌಡ, ಎಸ್‌.ಆರ್‌. ಗಂಗಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ್‌ಕುಮಾರ್‌ ಇತರರು ಇದ್ದರು. ಕೊರೊನಾ ನಿಯಂತ್ರಣ ಹಾಗೂ ಲಸಿಕಾಕರಣಕ್ಕಾಗಿ ಶ್ರಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next