Advertisement

ಪ್ರತಿಯೊಬ್ಬರೂ ಜಲ ಸಂರಕ್ಷಣೆಗೆ ಕಂಕಣಬದ್ಧರಾಗಲಿ

06:30 PM Jul 04, 2022 | Team Udayavani |

ಚಿತ್ರದುರ್ಗ: ನೀರು ಅತ್ಯಮೂಲ್ಯವಾಗಿದ್ದು, ನಲ್ಲಿಗಳನ್ನು ಉಪಯೋಗಿಸಿದ ನಂತರ ಬಂದ್‌ ಮಾಡುವ ಮೂಲಕ ನೀರಿನ ಸಂರಕ್ಷಣೆ ಮಾಡಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಕರೆ ನೀಡಿದರು. ನಗರದ ಜೋಗಿಮಟ್ಟಿ ರಸ್ತೆಯ ಕೆಎಸ್‌ ಆರ್‌ಟಿಸಿ ಬಡಾವಣೆಯಲ್ಲಿ ನಗರಸಭೆಯಿಂದ ಕಲ್ಪಿಸಿರುವ ಕುಡಿಯುವ ನೀರಿನ ಸಂಪರ್ಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ನಗರದಲ್ಲಿ ನೀರಿನ ಸಮಸ್ಯೆ ಇಲ್ಲದಂತೆ ಮಾಡಲಾಗಿದೆ. ಯಾರೂ ನೀರಿನ ಹಾಹಾಕಾರ ಎದುರಿಸುತ್ತಿಲ್ಲ. ಎಲ್ಲರ ಮನೆಗೂ ನೀರು ಸರಬರಾಜಾಗುತ್ತಿದೆ. ಕೆಎಸ್‌ಆರ್‌ಟಿಸಿ ಹೊಸ ಬಡಾವಣೆ ಆಗಿರುವುದರಿಂದ ನೀರಿನ ಸಂಪರ್ಕ ಇರಲಿಲ್ಲ. ಆದ್ದರಿಂದ ಸ್ಥಳೀಯರ ಮನವಿ ಮೇರೆಗೆ ನಗರಸಭೆ ಅಧಿ ಕಾರಿಗಳಿಗೆ ತಿಳಿಸಿ 5 ರಿಂದ 6 ಲಕ್ಷ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್‌ ಮಾಡುವ ಮುಖಾಂತರ ನೂರಾರು ಮನೆಗಳಿಗೆ ಪ್ರತಿ ಮನೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ನಗರಸಭೆಯ 34 ಮತ್ತು 35ನೇ ವಾರ್ಡ್ ಗಳು ಹೆಚ್ಚು ಜನಸಂಖ್ಯೆ ಮತ್ತು ಪ್ರದೇಶವನ್ನು ಹೊಂದಿದ್ದು ಸಮಾರು 30 ಕೋಟಿ ಅನುದಾನ ನೀಡಿ ಸಿಸಿ ರಸ್ತೆಗಳನ್ನು ಮಾಡಲಾಗಿದೆ. 11 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಕೆಲಸ ಪ್ರಾರಂಭವಾಗುವ ಹಂತದಲ್ಲಿದೆ.

ಐಯುಡಿಪಿ, ಟೀಚರ್ಸ್‌ ಕಾಲೋನಿ, ಕೆಎಸ್‌ ಆರ್‌ಟಿಸಿ ಬಡಾವಣೆಗಳಲ್ಲಿ ಖಾಲಿ ಇರುವ ಸ್ಥಳಗಳನ್ನು ಸ್ಥಳೀಯರು ಸ್ವಚ್ಚವಾಗಿಟ್ಟಕೊಂಡರೆ ಆರೋಗ್ಯವಾಗಿರಬಹುದು ಎಂದು ತಿಳಿಸಿದರು. ಈ ಹಿಂದೆ ನಗರಸಭೆಯಲ್ಲಿ ಗ್ಯಾಂಗ್‌ ರೂಪಿಸಿ ಸಾಮೂಹಿಕವಾಗಿ ಸ್ವಚ್ಛತೆ ಮಾಡಲಾಗುತ್ತಿತ್ತು. ಆ ಮಾದರಿಯಲ್ಲಿ ಎಲ್ಲಾ ಕಡೆಗಳಲ್ಲೂ ಸ್ವಚ್ಛತೆ ಮಾಡಬೇಕಾಗಿದೆ ಎಂದು ನಗರಸಭೆಯ ಪರಿಸರ ಅ ಧಿಕಾರಿಗೆ ಸೂಚಿಸಿದರು. ಸ್ಥಳೀಯರು ಹೊಸ ಬಡಾವಣೆಗೆ ಬೀದಿದೀಪ ಕೇಳಿದ್ದು ಕೂಡಲೇ 10ರಿಂದ 15 ಬೀದಿದೀಪಗಳನ್ನು ಅಳವಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.

ಅತಿ ಹೆಚ್ಚು ಜನವಸತಿ ಇರುವ ಪ್ರದೇಶದಲ್ಲಿ ಮೊದಲು ಪಾರ್ಕ್‌ ಅಭಿವೃದ್ಧಿ ಮಾಡಲಾಗುತ್ತಿದೆ. ಈಗ ಆದಿಶಕ್ತಿ ನಗರ, ಐಯುಡಿಪಿ, ಜೋಗಿಮಟ್ಟಿ ರಸ್ತೆಯಲ್ಲಿ 1.50 ಕೋಟಿ ರೂ.ಗಳಲ್ಲಿ ಮೂರು ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿ ಸದ್ಯದಲ್ಲೇ ಪ್ರಾರಂಭಿಸಲಾಗುವುದು. ಜೋಗಿಮಟ್ಟಿ ತಿರುವಿನಲ್ಲಿ ಪೂರ್ಣ ರಸ್ತೆ ಮಾಡಲು 3 ಕೋಟಿ ರೂ. ನೀಡಿದ್ದು ವಿಶಾಲವಾದ ರಸ್ತೆ ಮತ್ತು ಅಲಂಕಾರಿಕ ಬೀದಿದೀಪ ಅಳವಡಿಸಲಾಗುವುದು ಎಂದರು.

Advertisement

ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ, ಪೌರಾಯುಕ್ತ ಹನುಮಂತರಾಜು, ಮುಖಂಡರಾದ ಆರ್‌. ರಾಮು, ಹೇಮಂತ್‌ ಕುಮಾರ್‌, ಹನುಮಂತ ರೆಡ್ಡಿ, ಸೀತಾರಾಮಯ್ಯ, ಜನನಿ ಪ್ರಭು, ಭಗತ್‌, ಪರಮೇಶ್ವರಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next