Advertisement

ಶೈಕ್ಷಣಿಕ ಸಂಸ್ಥೆಗಳು ಮಂದಿರವಾಗಲಿ: ಕೋಟಗಾರ

06:23 PM Aug 03, 2022 | Team Udayavani |

ಕೊಪ್ಪಳ: ಮಕ್ಕಳನ್ನು ದೇವರ ಸಮಾನ ಎಂಬ ದೃಷ್ಟಿಕೋನದಿಂದ ನೋಡುವ ದೇಶ ನಮ್ಮದಾಗಿದ್ದು, ಇಲ್ಲಿನ ಶೈಕ್ಷಣಿಕ ಸಂಸ್ಥೆಗಳು ಮಂದಿರಗಳಾಗಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಮಹಿಳಾ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಜಾಗೃತಿ ಮತ್ತು ಕಾನೂನು ಅರಿವು ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ, ಮುಖ್ಯೋಪಾಧ್ಯಾಯರು, ಶಿಕ್ಷಕರು 18 ವರ್ಷದೊಳಗಿನ ಮಕ್ಕಳಿಗೆ ಲೈಂಗಿಕ ಕಿರುಕುಳ, ಹಲ್ಲೆ, ದೌರ್ಜನ್ಯ ಎಸಗಿರುವುದು ಕಣ್ಮುಂದಿದೆ. ಇದರಿಂದ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುವುದು ಅಲ್ಲದೇ ದೈಹಿಕ, ಮಾನಸಿಕ, ಸಾಮಾಜಿಕವಾಗಿ ಒತ್ತಡ ಉಂಟಾಗಿ ಅವರ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆದ್ದರಿಂದ ನಮ್ಮ ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಸ್ನೇಹಿಯಾಗುವುದರೊಂದಿಗೆ
ಅಲ್ಲಿ ಮಕ್ಕಳಿಗೆ ಮಕ್ಕಳ ಹಕ್ಕುಗಳು, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಾಹಿತಿ ಪ್ರಸರಿಸುವ ತಾಣಗಳಾಗಬೇಕು ಎಂದರು.

ಪ್ರಪಂಚದಲ್ಲಿ ಈಚೆಗೆ ಮಾನವ ಕಳ್ಳ ಸಾಗಾಣಿಕೆ ಅತಿಯಾಗಿ ನಡೆಯುತ್ತಿದ್ದು, ಎಲ್ಲ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ಅಂತಹ ವ್ಯಕ್ತಿಗಳೊಂದಿಗೆ ಜಾಗೃತರಾಗಿರಬೇಕು. ಮಹಿಳೆ ಯರನ್ನು ಸಾಗಾಣಿಕೆ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿ ಅಂತಹ ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡುವಂತಹ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ಸಾರ್ವಜನಿಕರು ಜಾಗೃತರಾಗಿರಬೇಕೆಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್‌ ವಕೀಲ ರವೀಂದ್ರ ಶೀಗನಹಳ್ಳಿ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಲೂ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಮಹಿಳೆಯರು ಮತ್ತು ಮಕ್ಕಳನ್ನು ಸಾಗಾಣಿಕೆ ಮಾಡಿ, ಅಂತಹವರನ್ನು ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮಹಿಳೆಯರ ಮತ್ತು ಮಕ್ಕಳ ಅಂಗಾಂಗಗಳನ್ನು ಊನಗೊಳಿಸಿ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದಾರೆ.ಎಲ್ಲರೂ ಜಾಗೃತರಾಗಿರಬೇಕೆಂದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್‌ ವಕೀಲ ಗವಿಸಿದ್ದಪ್ಪ ಮಾತನಾಡಿ, ಇಂದು ಮನುಷ್ಯ ಮನುಷ್ಯನನ್ನೇ ಮಾರಾಟ ಮಾಡಿ, ಕೆಟ್ಟದಾಗಿ ಬಳಕೆ ಮಾಡಿಕೊಂಡು ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಕಳೆದ 5 ವರ್ಷಗಳಲ್ಲಿ 753 ಪ್ರಕರಣಗಳು ದಾಖಲಾಗಿವೆ.

927 ಜನರನ್ನು ಬಂಧಿ ಸಿದೆ. ಆದರೆ ಶಿಕ್ಷೆಯಾಗಿದ್ದು ಮಾತ್ರ ಕೇವಲ 10 ಜನರಿಗೆ. ಇನ್ನೂ ಕಠಿಣವಾದ ಕಾನೂನು ಜಾರಿಗೆ ಬರಬೇಕಾಗಿದೆ. ಅಂದಾಗಲೇ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಸಾಧ್ಯ ಎಂದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಪ್ರಾರ್ಚಾರ್ಯ ಡಾ| ಗಣಪತಿ ಲಮಾಣಿ ಮಾತನಾಡಿದರು.ಕಾಲೇಜಿನ ಡಾ| ಹುಲಿಗೆಮ್ಮ, ಪ್ರತಿಭಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next