Advertisement

ದಿಂಗಾಲೇಶ್ವರ ಸ್ವಾಮೀಜಿ ದಾಖಲೆ ನೀಡಲಿ: ಕೋಟ

01:59 AM Apr 20, 2022 | Team Udayavani |

ಉಡುಪಿ: ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ದಾಖಲೆ ನೀಡಿದರೆ ಕೂಲಂಕಷ ತನಿಖೆ ನಡೆಸುತ್ತೇವೆ ಮತ್ತು ನನ್ನನ್ನು ಸಹಿತವಾಗಿ ಇಲಾಖೆಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಸಿದ್ಧರಿದ್ದೇವೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಿಂದ 12 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗದ ಮಠಗಳು ಸೇರಿದಂತೆ (ಉಳಿದದ್ದು ಹಿಂದುಳಿದ ವರ್ಗಗಳ ಮಠ) 65 ಮಠಗಳ ಅಭಿವೃದ್ಧಿಗೆ 119 ಕೋ.ರೂ. ಘೋಷಣೆ ಮಾಡಲಾಗಿದೆ. ಆ ಹಣ ಇನ್ನೂ ಮಠಗಳಿಗೆ ಬಿಡುಗಡೆಯಾಗಿಲ್ಲ. ಮಠಗಳಿಂದ ನಿರ್ದಿಷ್ಟ ದಾಖಲೆ ಪಡೆದು, ಯೋಜನ ವರದಿ ಸಿದ್ಧಪಡಿಸಿದ ಅನಂತರವಷ್ಟೇ ಹಣ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ಯಾವ ಕಾಮಗಾರಿಗೆ ಯಾರು ಹಣ
ಕೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ದಾಖಲೆಯನ್ನು ನೀಡಬೇಕು. ಆಗ ಮಾತ್ರ ಸಮಗ್ರ ತನಿಖೆ ಸಾಧ್ಯ ಎಂದರು.

ಗೊಂದಲ ಮೂಡಿಸದಿರಿ
ಸಾಧು ಸಂತರು ಸಮಾಜಕ್ಕೆ ಸಂದೇಶ ನೀಡುವಾಗ ಗೊಂದಲ ಇರಬಾರದು. ನಮ್ಮ ಎರಡು ಇಲಾಖೆಗಳೂ ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿವೆ. ಭ್ರಷ್ಟಾಚಾರ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ. ವಿಪಕ್ಷದ ನಾಯಕರಾದ ಸಿದ್ದರಾಮಯ್ಯ ಆರೋಪ ಮಾಡುವಾಗ ಸತ್ಯಕ್ಕೆ ಅಪಚಾರ ಮಾಡಬಾರದು. ಮಠಗಳಿಗೆ ಬಿಡುಗಡೆಯಾದ ಹಣ ನೇರವಾಗಿ ಮಠಕ್ಕೆ ಹೋಗುವುದಿಲ್ಲ. ಬದಲಾಗಿ ಅವರು ಸೂಚಿಸಿರುವ ಕಾಮಗಾರಿಗಳಾದ ಕಟ್ಟಡ, ಕಾರ್ಯಕ್ರಮ, ವಸತಿ ನಿಲಯ, ಶಾಲೆ ಇತ್ಯಾದಿಗಳಿಗೆ ಹೋಗುತ್ತದೆ. ಸರಿಯಾದ ದಾಖಲೆ ನೀಡದಿ ದ್ದಾಗ ಅನುದಾನ ವಾಪಸ್‌ ಪಡೆದಿರುವ ನಿದರ್ಶನವೂ ಇದೆ ಎಂದರು.

ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ
ರಾಜ್ಯ ಸರಕಾರ ಪುಂಡರು, ಪೋಕರಿಗಳು ಮತ್ತು ಕೆಟ್ಟವರನ್ನು ಕಟ್ಟುನಿಟ್ಟಾಗಿ ಮಟ್ಟ ಹಾಕುತ್ತಿದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಮಾಡುವ ಅಧಿಕಾರ ಎಲ್ಲರಿಗೂ ಇರುತ್ತದೆ. ಟೀಕೆ ಮಾಡುವವರೇ ಹೆಚ್ಚಿದ್ದರೆ ಸಮರ್ಥನೆ ಮಾಡುವವರು ಕಡಿಮೆಯಾದಾಗ ಟೀಕೆಯೇ ಸತ್ಯ ಎಂಬಂತೆ ತೋರುತ್ತದೆ. ಆದರೆ ವಾಸ್ತವ ಬೇರೆಯೇ ಇರುತ್ತದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು. ಕೋಮು ಗಲಭೆಯ ಮುನ್ಸೂಚನೆ ಸಿಕ್ಕಾಗ ಅದನ್ನು ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳ ಲಾಗುತ್ತದೆ ಎಂದರು.

ಜನಬಲವೇ ಉತ್ತರ ನೀಡಲಿದೆ
ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನಬಲದ ಮೂಲಕವೇ ನಾವು ಉತ್ತರ ನೀಡಲಿದ್ದೇವೆ. 150 ಸೀಟು ಗೆದ್ದೇ ಗೆಲ್ಲುತ್ತೇವೆ. ಸಚಿವ ಸಂಪುಟ ಪುನಃ ರಚನೆ, ವಿಸ್ತರಣೆ, ನಿಗಮ ಮಂಡಳಿಗಳಿಗೆ ಆಯ್ಕೆ ಇತ್ಯಾದಿ ಎಲ್ಲವೂ ಮುಖ್ಯಮಂತ್ರಿಯವರು ಹಾಗೂ ರಾಜ್ಯಾಧ್ಯಕ್ಷರು ಕೇಂದ್ರದ ವರಿಷ್ಠರ ಸೂಚನೆಯಂತೆ ಮಾಡಲಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next