Advertisement

ಡಿಜಿಟಲ್‌ ಸುರಕ್ಷೆ ಆದ್ಯತೆಯಾಗಲಿ

11:08 PM Nov 01, 2019 | Team Udayavani |

ದೇಶದ ಹಲವು ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಮೊಬೈಲ್‌ಗ‌ಳ ಮೇಲೆ ವಾಟ್ಸ್‌ಆ್ಯಪ್ ಮೂಲಕ ನಿಗಾ ಇರಿಸಿದ ಪ್ರಕರಣ ಕಳವಳಕಾರಿ ಮಾತ್ರವಲ್ಲದೆ ನಮ್ಮ ಸೈಬರ್‌ ಭದ್ರತಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದನ್ನು ಜಗಜ್ಜಾಹೀರುಗೊಳಿಸಿದೆ. ಇಸ್ರೇಲ್‌ನಲ್ಲಿ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿದ ಪೆಗಾಸಸ್‌ ಎಂಬ ತಂತ್ರಾಂಶವನ್ನು ಬಳಸಿ ಭಾರತವೂ ಸೇರಿದಂತೆ ಹಲವು ದೇಶಗಳ ಪ್ರಮುಖ ವ್ಯಕ್ತಿಗಳ ಮೊಬೈಲ್‌ಗೆ ವಾಟ್ಸ್‌ಆಪ್ ಮೂಲಕ ಕನ್ನ ಹಾಕಲಾಗಿದೆ. ಭಾರತದಲ್ಲಿ ಭೀಮಾ-ಕೋರೆಗಾಂವ್‌ ಹೋರಾಟಗಾರರ ಮೊಬೈಲ್‌ಗ‌ೂ ಕನ್ನ ಹಾಕಿರುವುದು ಈ ಪ್ರಕರಣಕ್ಕೆ ರಾಜಕೀಯ ಬಣ್ಣವನ್ನು ನೀಡಿದೆ. ಜಗತ್ತಿನಾದ್ಯಂತ ಈ ಗೂಢಚಾರಿಕೆ ನಡೆದಿದ್ದರೂ ಯಾರ ಪರವಾಗಿ ಈ ಕೆಲಸ ಮಾಡಲಾಗಿದೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.

Advertisement

ಇಷ್ಟು ಮಾತ್ರವಲ್ಲದೆ ಈ ವಾರದಲ್ಲಿ ಇನ್ನೂ ಎರಡು ಸೈಬರ್‌ ಕನ್ನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಒಂದು ಕೂಡಂಕುಲಂ ಅಣು ವಿದ್ಯುತ್‌ ಸ್ಥಾವರದ ಕಂಪ್ಯೂಟರ್‌ಗೆ ಲಗ್ಗೆ ಹಾಕಿರುವುದು. ಅದೃಷ್ಟವಶಾತ್‌ ಓರ್ವ ಸಿಬ್ಬಂದಿಯ ಕಂಪ್ಯೂಟರ್‌ ಮಾತ್ರ ಹ್ಯಾಕ್‌ ಆಗಿದೆ. ಅವರು ಆಡಳಿತಾತ್ಮಕ ವಿಭಾಗದ ಸಿಬ್ಬಂದಿ. ಹೀಗಾಗಿ ಅಣು ವಿದ್ಯುತ್‌ ಸ್ಥಾವರದ ರಹಸ್ಯ ಮಾಹಿತಿಗಳು ಸೋರಿಕೆಯಾಗಿಲ್ಲ. ಒಂದು ವೇಳೆ ಸ್ಥಾವರದ ಸರ್ವರ್‌ ಮೇಲೆ ವೈರಸ್‌ ದಾಳಿಯಾಗಿದ್ದರೆ ಅದರ ಪರಿಣಾಮ ಘೋರವಾಗುತ್ತಿತ್ತು. ಇನ್ನೊಂದು ಜೋಕರ್ ಸ್ಟಾಶ್‌ ಎಂಬ ವೈರಸ್‌ ಬಳಸಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮಾಹಿತಿಗಳನ್ನು ಲಪಟಾಯಿಸಿರುವುದು. ಸುಮಾರು 13 ಲಕ್ಷ ಕಾರ್ಡ್‌ಗಳ ಮಾಹಿತಿಗಳಿಗೆ ಕನ್ನ ಹಾಕಲಾಗಿದ್ದು, ಈ ಪೈಕಿ ಹೆಚ್ಚಿನ ಕಾರ್ಡ್‌ ಗಳು ಭಾರತೀಯರದ್ದು.

ಅಂತರ್‌ಜಾಲವನ್ನು ಬಳಸಿಕೊಂಡು ಈ ರೀತಿಯಾಗಿ ಮಾಹಿತಿ ಲಪಟಾಯಿಸುವುದು ಹೊಸದಲ್ಲವಾದರೂ ಅವುಗಳನ್ನು ತಡೆಗಟ್ಟುವ ವಿಚಾರಗಳಲ್ಲಿ ಉಳಿದ ದೇಶಗಳಿಗಿಂತ ನಾವು ಬಹಳ ಹಿಂದೆ ಇದ್ದೇವೆ ಎಂಬುದು ಆಗಾಗ ಸಾಬೀತಾಗುತ್ತಿರುತ್ತದೆ. 2013ರಲ್ಲೇ ಹೊಸ ಸೈಬರ್‌ ಕಾಯಿದೆಯನ್ನು ಜಾರಿಗೆ ತರಲಾಗಿದ್ದರೂ ಅದರಿಂದ ಸೈಬರ್‌ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ ಕಾರ್ಡ್‌ಗಳಿಗೆ ಯಾರಾದರೂ ಕನ್ನ ಹಾಕಿದರೆ 24 ತಾಸುಗಳ ಒಳಗಾಗಿ ಕಡ್ಡಾಯವಾಗಿ ದೂರು ನೀಡಬೇಕೆಂಬ ನಿಯಮ ಹಲವು ದೇಶಗಳಲ್ಲಿ ಇದೆ. ಆದರೆ ನಮ್ಮಲ್ಲಿ ಇಂಥ ಕಟ್ಟುನಿಟ್ಟಿನ ಕಾನೂನುಗಳು ಕೊರತೆಯಿದೆ.

ಸೈಬರ್‌ ಸುರಕ್ಷೆ ಶ್ರೇಯಾಂಕದಲ್ಲಿ ನಾವು ಹೊಂದಿರುವ ಸ್ಥಾನವೇ ಈ ವಿಚಾರದಲ್ಲಿ ನಾವು ಇನ್ನಷ್ಟು ಸುಧಾರಣೆಗಳನ್ನು ತರಬೇಕಾಗಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತದೆ. 2017ರಲ್ಲಿ ಭಾರತ 23 ಮತ್ತು ಬ್ರಿಟನ್‌ 12ನೇ ಸ್ಥಾನದಲ್ಲಿತ್ತು. ಬ್ರಿಟನ್‌ ಅನಂತರ ಕೋಟಿಗಟ್ಟಲೆ ಅನುದಾನವನ್ನು ಸೈಬರ್‌ ಸುರಕ್ಷೆಗೆ ಮೀಸಲಿಟ್ಟು ತ್ವರಿತವಾಗಿ ಭದ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ 2018ರಲ್ಲಿ ಒಂದನೇ ಸ್ಥಾನಕ್ಕೇರಿದರೆ ಭಾರತ 47ನೇ ಸ್ಥಾನಕ್ಕೆ ಕುಸಿದಿದೆ.

ಆಧಾರ್‌, ಮೈಗವ್‌, ಗವರ್ನಮೆಂಟ್‌ ಇ-ಮಾರ್ಕೆಟ್‌, ಡಿಜಿಲಾಕರ್‌, ಭಾರತ್‌ನೆಟ್‌, ಸ್ಟಾರ್ಟ್‌ಅಪ್‌ ಇಂಡಿಯಾ ಎಂದು ದೇಶವನ್ನು ಸಂಪೂರ್ಣ ಡಿಜಿಟಲ್‌ವುಯಗೊಳಿಸಲು ಸರಕಾರ ಇನ್ನಿಲ್ಲದ ಸಂಪನ್ಮೂಲವನ್ನು ವ್ಯಯಿಸುತ್ತಿದೆ. ಡೇಟಾವನ್ನು 21ನೇ ಶತಮಾನದ ಸಂಪನ್ಮೂಲ ಎಂದು ಬಣ್ಣಿಸಲಾಗುತ್ತಿದೆ. ಆದರೆ ಈ ಸಂಪನ್ಮೂಲವನ್ನು ರಕ್ಷಿಸಲು ಕೈಗೊಂಡಿರುವ ಕ್ರಮಗಳು ಮಾತ್ರ ಏನೇನೂ ಸಾಲದು. ಆನ್‌ಲೈನ್‌ ಮೂಲಕ ಹಣಕಾಸು ವಂಚನೆ ಎಸಗುವುದು, ಖಾಸಗಿ ಮಾಹಿತಿಗಳನ್ನು ಲಪಟಾಯಿಸುವುದು, ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಹ್ಯಾಕ್‌ ಮಾಡಿ ಸಲ್ಲದ ವಿಚಾರಗಳನ್ನು ತುರುಕುವುದೆಲ್ಲ ನಿತ್ಯ ಎಂಬಂತೆ ನಡೆಯುತ್ತಿದೆ.

Advertisement

ನಾವು ಡಿಜಿಟಲ್‌ ಉಪಕ್ರಮಗಳಿಗೆ ಹೆಚ್ಚು ಒತ್ತುಕೊಟ್ಟಷ್ಟು ಅದಕ್ಕೆ ಕನ್ನ ಹಾಕುವ ಪ್ರಕರಣಗಳೂ ಹೆಚ್ಚುತ್ತಿವೆ. ಸಮಗ್ರ ಡಿಜಿಟಲ್‌ ನೀತಿಯೊಂದರ ಅಗತ್ಯ ಈಗ ಬಹಳ ಇದೆ. ಅಂತೆಯೇ ಡಿಜಿಟಲ್‌ ಸುರಕ್ಷೆಯತ್ತ ಸರಕಾರ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next