Advertisement

ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ

12:03 PM May 18, 2018 | |

ಬೆಂಗಳೂರು: ಕಾಂಗ್ರೆಸ್‌ ನಾಯಕರು ಶಾಸಕರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಳ್ಳುವ ಬದಲು ಎಲ್ಲರೊಂದಿಗೆ ಕಾಡಿಗೆ ಹೋಗಿ ಸೋಲಿನ ಕಾರಣಗಳ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಹಾವು- ಮುಂಗೂಸಿಯಂತಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗ ಒಂದಾಗುತ್ತಿವೆಯಂತೆ. ಹಾವು- ಮುಂಗೂಸಿ ಎಂದಾದರೂ ಒಂದಾಗುವುದೇ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಈ ಕೃತ್ಯಕ್ಕೆ ಮುಂದಾಗಿವೆ ಎಂದು ಕಿಡಿ ಕಾರಿದರು.

ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಭಿಕ್ಷುಕರಂತೆ ಜೆಡಿಎಸ್‌ನವರ ಮುಂದೆ ಕೈಕಟ್ಟಿ ನಿಂತಿದ್ದಾರೆ. ಐದು ವರ್ಷದಲ್ಲಿ ನೀಡಿದ ಭಾಗ್ಯ ಯೋಜನೆಗಳು ಕೈಹಿಡಿಯದಿರುವುದು ಏಕೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲಿಗೆ ಕಾರಣವೇನು ಎಂಬ ಬಗ್ಗೆ ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ ಪ್ರತಿಭಟನೆ ನಡೆಸುತ್ತಿರುವುದರ ಕಾರಣ ಗೊತ್ತಾಗುತ್ತಿಲ್ಲ. ಪ್ರತಿಭಟನೆ ನಡೆಸಲು ಎರಡೂ ಪಕ್ಷಗಳಿಗೆ ನೈತಿಕತೆ ಇಲ್ಲ. 38 ಸ್ಥಾನ ಪಡೆದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಪಡೆಯುವ ಆಸೆ ಇರುವಾಗ 104 ಸ್ಥಾನ ಪಡೆದ ಬಿಜೆಪಿಯವರಿಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರಬಾರದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌- ಜೆಡಿಎಸ್‌ ಷಡ್ಯಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣದಿಂದ ಕಾಂಗ್ರೆಸ್‌, ಜೆಡಿಎಸ್‌ ಷಡ್ಯಂತ್ರ ನಡೆಸಿವೆ ಎಂದು ಆರೋಪಿಸಿದ ಸಂಸದೆ ಶೋಭಾ ಕರಂದ್ಲಾಜೆ, 2- 3 ದಿನಗಳಲ್ಲಿ ಯಡಿಯೂರಪ್ಪ ಅವರು 120ಕ್ಕೂ ಹೆಚ್ಚು ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ, ಮಹಿಳಾ ವಿರೋಧಿ ಧೋರಣೆ ಹಾಗೂ ಸಿದ್ದರಾಮಯ್ಯ ಅವರ ದುರಂಹಕಾರದಿಂದ ಜನ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ಗೌರವಯುತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿರಬೇಕಾದ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ನೊಂದಿಗೆ ಕೈಜೋಡಿಸಿದೆ ಎಂದು ದೂರಿದರು.

ಹೆದರಿಕೆಯಿಂದಾಗಿ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ ಮೊರೆ ಹೋಗಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯಿದ್ದಿದ್ದರೆ ರೆಸಾರ್ಟ್‌ ರಾಜಕಾರಣ ಮಾಡುತ್ತಿರಲಿಲ್ಲ. ಬಹಳಷ್ಟು ಕ್ಷೇತ್ರಗಳಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿವೆ. 38 ಶಾಸಕ ಬಲದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್‌ನ ಹಲವರಿಗೆ ಇಷ್ಟವಿಲ್ಲ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ದೌರ್ಜನ್ಯಕ್ಕೊಳಗಾದ ಹಲವು ಶಾಸಕರು ಕಾಂಗ್ರೆಸ್‌ನಲ್ಲಿದ್ದಾರೆ. ಅಂತಹ ಶಾಸಕರು ಕಾಂಗ್ರೆಸ್‌ ನಡೆಗೆ ವಿರೋಧ ವ್ಯಕ್ತಪಡಿಸುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿಯ ಎಲ್ಲ ಶಾಸಕರು ವೈಯಕ್ತಿಕ ಪತ್ರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ ಎಂಬುದಾಗಿ ಜೆಡಿಎಸ್‌, ಕಾಂಗ್ರೆಸ್‌ ಅಪಪ್ರಚಾರ ನಡೆಸುತ್ತಿವೆ. ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ನೀಡಿದ್ದ ಪತ್ರ ಸಲ್ಲಿಸಬೇಕು ಎಂದಷ್ಟೇ ಸುಪ್ರೀಂ ಕೋರ್ಟ್‌ ಸೂಚಿಸಿದೆ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next