ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಕಿಸಾನ್ ಕಾಂಗ್ರೆಸ್ ಜನರ ಮಧ್ಯೆ ನಿರಂತರ ಒಡನಾಟ ಹೊಂದಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಭಾನುವಾರ ತಮ್ಮನ್ನು ಭೇಟಿ ಮಾಡಿದ ಕಾಂಗ್ರೆಸ್ ಕಿಸಾನ್ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಅವರೊಂದಿಗೆ ಪಕ್ಷದ ಸಂಘಟನೆ ಕುರಿತು ಚರ್ಚಿಸಿ ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರೊಂದಿಗೆ ಸೇರಿ ಸಂಘಟನೆ ಮಾಡಲು ಶ್ರಮಿಸಬೇಕು ಎಂದರು.
ಕಿಸಾನ್ ಸೆಲ್ ಜಿಲ್ಲಾ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ, ಕೋವಿಡ್ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್‌ನೀಡಿದೆ. ಸಂಕಷ್ಟದಲ್ಲಿದ್ದ ರೈತರಿಗೆ ಆರ್ಥಿಕ ನೆರವು ಕೂಡ ಮಾಡಲಾಗಿದೆ. ಸೀಲ್‌ಡೌನ್ ಪ್ರದೇಶಗಳಲ್ಲಿ ನಿರಂತರವಾಗಿ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪಕ್ಷವನ್ನ ತಳ ಮಟ್ಟದಿಂದಲೂ ಸಂಘಟಿಸುತ್ತಿದೆ. ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸಾಕಷ್ಟು ಹೋರಾಟ ಮಾಡುವ ಮೂಲಕ ಜನರಿಗೆ ಬಿಜೆಪಿಯ ದುರಾಡಳಿ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತೆರುವಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹಿರಿಯ ಮುಖಂಡರ ಸಲಹೆ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ. ದಾವಣಗೆರೆ ಜಿಲ್ಲೆಯಲ್ಲಿ ಕಿಸಾನ್ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಬದ್ಧವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಹುಲ್ಲುಮನೆ ಗಣೇಶ್, ಎಲ್.ಎಚ್. ಸಾಗರ್,ರಾಘು ದೊಡ್ಮನಿ, ಇಬ್ರಾಹಿಂ ಖಲೀಲ್ ವುಲ್ಲಾ, ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಎಸ್. ಕೆ. ಪವನ್ ಇತರರು ಇದ್ದರು.