Advertisement

ಸಿಐಐಎಲ್‌ ದೇಶದ ಅತ್ಯುನ್ನತ ಸಂಸ್ಥೆಯಾಗಲಿ

09:34 PM Jul 17, 2019 | Lakshmi GovindaRaj |

ಮೈಸೂರು: ಭಾರತೀಯ ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಅವುಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಭಾರತೀಯ ಭಾಷಾ ಸಂಸ್ಥಾನವನ್ನು ದೇಶದ ಭಾಷಾ ಕೇಂದ್ರಗಳ ಮಾತೃ ಸಂಸ್ಥೆಯನ್ನಾಗಿ ಮಾಡಬೇಕಿದೆ ಎಂದು ಭಾರತೀಯ ಭಾಷಾ ಸಂಸ್ಥಾನದ ಸಂಸ್ಥಾಪಕ ನಿರ್ದೇಶಕ ಪ್ರೊ.ಡಿ.ಪಿ. ಪಟ್ನಾಯಕ್‌ ಹೇಳಿದರು.

Advertisement

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್‌) ಆವರಣದಲ್ಲಿ ನಡೆದ ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಸಮಾರೋಪದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಭಾರತದ ಭಾಷೆಗಳ ಸ್ಥಿತಿ ಅಳಿವಿನಂಚಿನಲ್ಲಿದೆ. ಜೊತೆಗೆ ಭಾರತೀಯ ಭಾಷಾ ಸಂಸ್ಥಾನವೂ ಕೂಡ ಅದೇ ಹಾದಿಯಲ್ಲಿದೆ.

ಈ ಸಂದರ್ಭ ನಾವು ಭಾರತೀಯ ಭಾಷೆಗಳನ್ನು ಉಳಿಸಿಕೊಳ್ಳಲು ಭಾರತೀಯ ಭಾಷಾ ಸಂಸ್ಥಾನವನ್ನು ದೇಶದ ಅತ್ಯುನ್ನತ ಸಂಸ್ಥೆಯನ್ನಾಗಿ ರೂಪಿಸಬೇಕಿದೆ. ಈ ಸಂಸ್ಥೆಯು ದೇಶದ ಎಲ್ಲಾ ಭಾಷಾ ಕೇಂದ್ರಗಳ ಮಾತೃ ಸಂಸ್ಥೆಯಾಗಿ ರೂಪುಗೊಳ್ಳಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದರು.

ಭಾರತೀಯ ಭಾಷಾ ಸಂಸ್ಥಾನಕ್ಕೆ 50 ವರ್ಷಗಳು ತುಂಬಿದೆ. ಆದರೆ, ಈ 50 ವರ್ಷಗಳು ಸುಲಭದಿಂದ ಬಂದಿಲ್ಲ. ಸಾಕಷ್ಟು ಕಷ್ಟದಿಂದ ಈ ಮಟ್ಟಕ್ಕೆ ಬೆಳೆದಿದೆ. ಇತ್ತೀಚೆಗೆ ಬರುತ್ತಿರುವ ಶಿಕ್ಷಣ ನೀತಿಗಳಲ್ಲಿ ಭಾರತೀಯ ಭಾಷಾ ಸಂಸ್ಥಾನದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇದು ಸಮಂಜಸವಲ್ಲ. ಶಿಕ್ಷಣ ನೀತಿಯಲ್ಲಿ ಭಾರತೀಯ ಭಾಷಾ ಸಂಸ್ಥಾನದ ಬಗ್ಗೆಯೂ ಪ್ರಸ್ತಾಪ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಭಾಷಾ ಸಂಸ್ಥಾನದಿಂದ ಪ್ರಕಟಿಸಲಾದ 16 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸದ್ದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Advertisement

ಈ ಸಂದರ್ಭ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ. ರಾವ್‌, ಪ್ರೊ. ಉಮಾರಾಣಿ ಪಿ., ಪ್ರೊ. ಉದಯ್‌ ನಾರಾಯಣ ಸಿಂಗ್‌, ಪ್ರೊ. ನಾರಾಯಣ ಚೌದರಿ ಇದ್ದರು.

197 ಭಾಷೆಗಳು ವಿನಾಶದಂಚಿಗೆ: ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಮಾತನಾಡಿ, ಸುಮಾರು 200 ವರ್ಷಗಳಿಂದಿಚೆಗೆ ಇಂಗ್ಲಿಷ್‌ ಭಾಷೆಯ ಪ್ರಭಾವದಿಂದಾಗಿ, ಜಗತ್ತಿನಾದ್ಯಂತ ಬಹುತೇಕ ಸ್ಥಳೀಯ ಭಾಷೆಗಳು ಹಾಗೂ ಅಳಿವಿನಂಚಿನಲ್ಲಿದ್ದ ಭಾಷೆಗಳು ಕಣ್ಮರೆಯಾದವು.

ಪತ್ರಿಕೆಯೊಂದರ ಅಂಕಿಅಂಶದ ಪ್ರಕಾರ 1961ರಲ್ಲಿ ಭಾರತದಲ್ಲಿ ಸುಮಾರು 1652 ಭಾಷೆಗಳಿದ್ದವು. ಕ್ರಮೇಣ ಭಾಷೆಗಳು ಕಡಿಮೆಯಾಗುತ್ತಾ ಬಂದವು. 1971ರಲ್ಲಿ ಭಾಷೆಗಳ ಸಂಖ್ಯೆ 808ಕ್ಕೆ ಇಳಿಕೆಯಾಯಿತು. 2020ಕ್ಕೆ ಈ ಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ಗಣತಿ ಪ್ರಕಾರ ಸುಮಾರು 197 ಭಾಷೆಗಳು ವಿನಾಶದಂಚಿಗೆ ತಲುಪಿದ್ದು, ಈ ಭಾಷೆಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ಕಾರ್ಯ ತುರ್ತಾಗಿ ಆಗಬೇಕಿದೆ. ಈ ಶತಮಾನದ ಕೊನೆಯಲ್ಲಿ ಸುಮಾರು 7 ಸಾವಿರ ಭಾಷೆಗಳು ಅವನತಿಯತ್ತ ಸಾಗಲಿವೆ ಎಂದು ಭಾಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಭಾಷೆಗಳು ಬಳಕೆಯಲ್ಲಿರುವ ಸ್ಥಳೀಯ ಮತ್ತು ಪ್ರಾದೇಶಿಕ ಭಾಷೆಗಳ ಮೇಲೆ ಪ್ರಭಾವ ಬೀರಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next