ವಿಜಯಪುರ: ಅಪಾಯಕಾರಿ ಉದ್ದಿಮೆಗಳಲ್ಲಿ ಸಿಲುಕಿರುವ ಬಾಲಕಾರ್ಮಿಕರನ್ನು ಮುಕ್ತಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸೋಣ ಎಂದು ಭಾರತೀಯ ಸೀನಿಯರ್ ಛೇಂಬರ್ ವಿಜಯಪುರ ಲೀಜನ್ ಅಧ್ಯಕ್ಷ ಡಾ. ವಿ.ಎನ್.ರಮೇಶ್ ತಿಳಿಸಿದರು.
ಪ್ರಭಂಜನ್ ಎಜುಕೇಷನ್ ಟ್ರಸ್ಟ್, ಭಾರತೀಯ ಸೀನಿಯರ್ ಛೇಂಬರ್ ವಿಜಯಪುರ ಲೀಜನ್ ಮತ್ತು ರಾಷ್ಟ್ರೀಯ ಬಾಲ ಕಾರ್ಮಿಕರ ವಿಶೇಷ ಶಾಲೆಯಿಂದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
14 ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈಗ ಸುಣ್ಣದಕಲ್ಲು, ಪಟಾಕಿ ಕಾರ್ಖಾನೆ, ರೇಷ್ಮೆ ಕೈಮಗ್ಗ, ಹೋಟೆಲ್, ಅಂಗಡಿ, ಗ್ಯಾರೇಜು ಹಾಗೂ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅವರ ಜೀವನ ಹಾಳಾಗುತ್ತಿದೆ. ಸಮಾಜದಲ್ಲಿ ಇಂತಹ ಒಂದು ಕೆಟ್ಟ ವ್ಯವಸ್ಥೆ ಈಗಲೂ ನಡೆಯುತ್ತಿದೆ. ಇದು ಅಪರಾಧ ಗೊತ್ತಿದ್ದರೂ ಮಾಲಿಕರು ಎಚ್ಚೆತ್ತುಕೊಂಡಿಲ್ಲ.
ಇಡೀ ವಿಶ್ವವೇ ಈ ನಿಟ್ಟಿನಲ್ಲಿ ಹೋರಾಡಬೇಕಿದೆ. ಸರ್ಕಾರ, ಎನ್‌ಜಿಒಗಳು, ಸಂಘ ಸಂಸ್ಥೆಗಳು, ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂತಹ ಕೆಟ್ಟ ಪದ್ಧತಿಯಿಂದ ಮಕ್ಕಳನ್ನು ಮುಕ್ತಗೊಳಿಸಲು ಸಹಕಾರ ನೀಡಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಬಾಲ ಕಾರ್ಮಿಕ ಶಾಲೆ ಶಿಕ್ಷಕ ಶೋಭಾರನ್ನು ಸನ್ಮಾನಿಸಲಾಯಿತು.
ಪ್ರಭಂಜನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ರಮೇಶ್, ರಾಷ್ಟ್ರೀಯ ಬಾಲಕಾರ್ಮಿಕ ವಿಶೇಷ ಶಾಲೆ ಶಿಕ್ಷಕಿ ಉಮಾದೇವಿ, ಶೃಂಗೇರಿ ಶಾರದಾ ಶಾಲೆ ಸಂಯೋಜಕ ಉಮಾದೇವಿ, ಶಿಕ್ಷಕ ಮಧುಕುಮಾರ್, ವಾಣಿಶ್ರೀ, ವಿಜಯಪುರ ಲೀಜನ್ ನಿರ್ದೇಶಕ ನಾರಾಯಣಸ್ವಾಮಿ, ಸಹಾಯಕಿ ನೇತ್ರಾವತಿ ಮತ್ತಿತರರು ಇದ್ದರು.