ಬ್ರಿಟನ್‌ನ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ನಿಯೋಜನೆಗೊಂಡಿರುವುದು ಭಾರತೀಯರಲ್ಲಿ ಹರ್ಷ, ಹೆಮ್ಮೆ ಇಮ್ಮಡಿಗೊಳಿಸಿವೆ. ಈ ಹಿಂದೆ ಅಮೆರಿಕದ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಆಯ್ಕೆಯಾದಾಗ ಉಂಟಾದ ಸಂತೋಷಕ್ಕಿಂತ ಇದು ಹೆಚ್ಚಿನದು. ಅದಕ್ಕೆ ಕಾರಣಗಳಿವೆ.
ಬ್ರಿಟನ್ ಒಂದು ಕಾಲದಲ್ಲಿ “ಸೂರ್ಯ ಮುಳುಗದ ನಾಡು’ ಎಂಬ ಉಪಾಧಿ ಹೊಂದಿತ್ತು. ಜಗತ್ತಿನೆಲ್ಲೆಡೆ ಅದು ವಸಾಹತುಗಳನ್ನು ಹೊಂದಿ ದ್ದುದೇ ಇದರ ಹಿಂದಿದ್ದ ಕಾರಣ. ಭಾರತವೂ ಅವುಗಳ ಪೈಕಿ ಒಂದಾಗಿದ್ದನ್ನು ಮರೆಯುವಂತಿಲ್ಲ. ಸರಿಸುಮಾರು 1858ರಲ್ಲಿ ಆರಂಭಗೊಂಡಿದ್ದ ವಸಾಹತುಶಾಹಿ ಆಳ್ವಿಕೆ ಕೊನೆಗೊಂಡುದು 1947ರಲ್ಲಿ. ಸುಮಾರು ಒಂದು ಶತಮಾನದಷ್ಟು ಕಾಲ ಭಾರತವು ಬ್ರಿಟನ್‌ನ ಅಧೀನದಲ್ಲಿತ್ತು.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಈ 75 ವರ್ಷಗಳಲ್ಲಿ ಜಾಗತಿಕ ರಾಜಕೀಯ, ಆರ್ಥಿಕ ಆಗುಹೋಗುಗಳಲ್ಲಿ ಅನೂಹ್ಯ ಎಂಬಂತಹ ಬದಲಾವಣೆಗಳಾಗಿವೆ. ಬ್ರಿಟನ್‌ನ “ಸೂರ್ಯ ಮುಳುಗದ ನಾಡು’ ಎಂಬ ಬಿರುದು ಜೀರ್ಣವಾಗಿದೆ. ಇಷ್ಟು ಮಾತ್ರ ಅಲ್ಲ; ನಿರ್ದಿಷ್ಟವಾಗಿ ಹೇಳಬೇಕೆಂದರೆ ಕೊರೊನೋತ್ತರ ಕಾಲಘಟ್ಟ ಮತ್ತು ಅದಕ್ಕೆ ಹಿಂದಿನ ಕೆಲವು ವರ್ಷಗಳಿಂದ ಈಚೆಗೆ ಬ್ರಿಟನ್ ಸ್ವತಃ ಭಾರೀ ಆರ್ಥಿಕ ಹಿನ್ನಡೆ – ಬಿಕ್ಕಟ್ಟನ್ನು ಅನುಭವಿಸಿದೆ. ಅನುಭವಿಸುತ್ತಿದೆ.
ರಿಷಿ ಸುನಕ್ ಪ್ರಧಾನಿ ಪಟ್ಟಕ್ಕೇರುವ ಮುನ್ನುಡಿ ಬರೆದದ್ದು ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ. ಅದಾಗಿ ಭಾರತೀಯ ಮೂಲ ಮತ್ತು ಭಾರತದ ಜತೆಗಿನ ಸಂಬಂಧವನ್ನು ವಿವಾಹದ ಮೂಲಕ ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ರಿಷಿ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದರು. ಬೋರಿಸ್ ಜಾನ್ಸನ್ ಸಂಫುಟದಲ್ಲಿ ರಿಷಿ ವಿತ್ತ ಸಚಿವರಾಗಿದ್ದವರು. ಕೊರೊನಾ ವೇಳೆ ಅವರ ವಿತ್ತೀಯ ನೀತಿ ಮತ್ತು ನಿರ್ವಹಣೆ ಜಗಮೆಚ್ಚುಗೆ ಗಳಿಸಿ ಬ್ರಿಟಿಷ್ ಆರ್ಥಿಕತೆ ಯನ್ನು ಸರಿಯಾದ ದಾರಿಯತ್ತ ಕೊಂಡೊಯ್ದಿತ್ತು. ಆದರೂ ಪ್ರಧಾನಿ ಹುದ್ದೆಗೆ ಸ್ಪರ್ಧೆ ವೇಳೆ ಅಪಪ್ರಚಾರದಿಂದ ಹಿನ್ನಡೆಯಾಯಿತು. ಆರಂಭದಲ್ಲಿ ಅವರು ಮುಂಚೂಣಿಯಲ್ಲಿದ್ದರೂ ಬಳಿಕ ಲಿಜ್ ಟ್ರಸ್ ಮುನ್ನೆಲೆಗೆ ಬಂದು ಅವರೇ ಆಯ್ಕೆಯಾಗಿದ್ದರು. ಮುಂದಿನ ನಾಟಕೀಯ ನಡೆಯಲ್ಲಿ ಲಿಜ್ ಪದತ್ಯಾಗ ಮಾಡಿದರು. ಅದಕ್ಕೆ ಮುನ್ನ ಪ್ರಚಾರದ ಸಂದರ್ಭದಲ್ಲಿ ಇದೇ ರಿಷಿ ಸುನಕ್ ಅವರು ಬಿಂಬಿಸಿದ್ದ ಆರ್ಥಿಕ ನೀತಿಗಳ ವೈಫಲ್ಯದ ಬಗ್ಗೆ ಭವಿಷ್ಯ ನುಡಿದಿದ್ದರು ಟ್ರಸ್. ರಿಷಿ ಸುನಕ್ ಪುನರಾಗಮನ ಅವರ ವಿತ್ತೀಯ ದೂರದೃಷ್ಟಿ, ವಿತ್ತೀಯ ನೀತಿಗಳು ಸರಿಯಾಗಿವೆ ಎಂಬುದನ್ನು ಶ್ರುತಪಡಿಸುವಂತಿದೆ. ಆರಂಭದಲ್ಲಿ ಹೇಳಿದ ಹಾಗೆ ಯಾವ ದೇಶದ ವಸಾಹತುವಾಗಿ ನಾವಿದ್ದೆವೋ ಅದೇ ದೇಶದ ಪ್ರಧಾನಿಯಾಗಿ ಭಾರತೀಯ ಮೂಲದವರೊಬ್ಬರು ಆಯ್ಕೆಯಾ ಗಲಿದ್ದಾರೆ ಎಂಬ ಸಂಗತಿ ಹರ್ಷ ಮತ್ತು ಹೆಮ್ಮೆ ತಂದಿರುವುದು ಸಹಜ.
ರಿಷಿ ಆಯ್ಕೆ ಇತಿಹಾಸಕ್ಕೆ ಉತ್ತರ ಎಂಬ ಹರ್ಷದ ನಡುವೆ ವರ್ತಮಾನವನ್ನು ಮರೆಯಲಾಗದು. ಪ್ರಧಾನಿಯಾಗಿ ಭಾರತದ ಜತೆಗಿನ ಸಂಬಂಧದ ವಿಚಾರದಲ್ಲಿ ರಿಷಿ ಪೂರಕ ಹೆಜ್ಜೆಗಳನ್ನು ಇರಿಸುತ್ತಾರೆಂಬ ನಿರೀಕ್ಷೆ ಭಾರತದ್ದೂ ಸಹ. ಭಾರತದಿಂದ ಕಲಿಕೆ ಮತ್ತು ಉದ್ಯೋಗಕ್ಕಾಗಿ ತೆರಳುವ ಅನಿವಾಸಿ ಭಾರತೀಯರ ಸಂಖ್ಯೆ ಚಿಕ್ಕದಿಲ್ಲ. ಅವರ ಹಿತಕ್ಕೆ ಪೂರಕವಾದ ನೀತಿಗಳು ರೂಪುಗೊಳ್ಳಲಿ ಎಂಬ ಒತ್ತಾಸೆಯೂ ಇದೆ. ಕರ್ನಾಟಕದ ಮಟ್ಟಿಗೆ ಹೆಚ್ಚು ನಿಕಟ ಸಂಬಂಧ ಹೊಂದಿರುವ ರಿಷಿ ಸುನಕ್ ಈ ಅಭಿಮತಕ್ಕೆ ಪೂರಕವಾಗಿ ನಡೆದುಕೊಳ್ಳಲಿ. ಶುಭ ಹಾರೈಕೆಗಳು.