ರಬಕವಿ-ಬನಹಟ್ಟಿ: ಜಮಖಂಡಿಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಯಾದರೆ ಜಮಖಂಡಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತದೆ. ಈಗಾಗಲೇ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಘಟಕ ಜಮಖಂಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆಲವು ಪ್ರಭಾವಿಗಳಿಂದಾಗಿ ವಿಶ್ವ ವಿದ್ಯಾಲಯದ ಸ್ಥಾಪನೆಯನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ರಾಜ್ಯ ಸರ್ಕಾರ ಬಾಗಲಕೋಟೆ ಜಿಲ್ಲೆಗೆ ಘೋಷಣೆಯಾದ ವಿಶ್ವ ವಿದ್ಯಾಲಯವನ್ನು ಮರು ಆದೇಶ ಮಾಡಬೇಕು ಎಂದು ಹಿರಿಯ ವಕೀಲ ಎಂ.ಜಿ.ಕೆರೂರ ತಿಳಿಸಿದರು.
ಬುಧವಾರ ಸ್ಥಳೀಯ ತಹಶೀಲ್ಧಾರ್ ಕಾರ್ಯಾಲಯದಲ್ಲಿ ಜಮಖಂಡಿಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ತಹಶೀಲ್ದಾರ್ ಎಸ್.ಬಿ.ಇಂಗಳೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ವಕೀಲ ವರ್ಧಮಾನ ಕೋರಿ ಮಾತನಾಡಿ, ಜಿಲ್ಲೆಗಳ ನಿರ್ಮಾಣದ ಸಂದರ್ಭದಲ್ಲಿ ಜಮಖಂಡಿಗೆ ಅನ್ಯಾಯವಾಗಿದೆ. ಈಗ ವಿಶ್ವ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸರ್ಕಾರ ಆದೇಶ ಮಾಡಿದ ನಂತರ ಅದನ್ನು ತಡೆ ಹಿಡಿದಿರುವುದರಿಂದ ಜಮಖಂಡಿ ನಗರಕ್ಕೆ ಮತ್ತೆ ಅನ್ಯಾಯ ಮಾಡಿದಂತಾಗುತ್ತದೆ. ೧೯೪೭ ರ ಕ್ಕಿಂತ ಮುಂಚೆ ಜಮಖಂಡಿ ರಾಜ್ಯವಾಗಿತ್ತು. ರಾಜ್ಯ ಘೋಷಣೆ ಮಾಡಿದ ಏಳು ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಇಲ್ಲಿ ಸ್ಥಾಪನೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಆದೇಶ ಮಾಡಬೇಕಾಗಿದೆ ಎಂದರು.
ವಕೀಲರ ಸಂಘದ ಶ್ರೀಕಾಂತ ಕುಲಕರ್ಣಿ ಮನವಿ ಪತ್ರವನ್ನು ಓದಿ ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಈಶ್ವರಚಂದ್ರ ಭೂತಿ, ಸುರೇಶ ಗೊಳಸಂಗಿ, ಕೆ.ಡಿ.ತುಬಚಿ, ರಾಜು ಫಕೀರಪೂರ, ಬಸವರಾಜ ಪುಟಾಣಿ, ಎಂ.ಕೆ. ಕೋಪರ್ಡೆ, ರವೀಂದ್ರ ಸಂಪಗಾವಿ, ಅರ್ಜುನ ಜಿಡ್ಡಿಮನಿ, ಚನ್ನು ಮಾಲಾಪುರ, ಮಹಾಂತೇಶ ಪದಮಗೊಂಡ ಸೇರಿದಂತೆ ವಕೀಲರ ಸಂಘದ ಸದಸ್ಯರು ಇದ್ದರು.