Advertisement

ಜವಾಬ್ದಾರಿಯುತ ಪತ್ರಕರ್ತ ಪ್ರಬುದ್ಧನಾಗಿರಲಿ:ಡಾ|ಹರೀಶ್‌ ರಾಮಸ್ವಾಮಿ

05:57 PM Nov 17, 2021 | Team Udayavani |

ರಾಯಚೂರು: ಸಮಾಜವನ್ನು ಎಚ್ಚರಿಸುವ ಏಕೈಕ ಸಾಧನ ಮಾಧ್ಯಮ. ಅಂತಹ ಜವಾಬ್ದಾರಿಯುತ ಹೊಣೆ ನಿಭಾಯಿಸುವ ಪತ್ರಕರ್ತ ಕೂಡ ಪ್ರಬುದ್ಧನಾಗಿರಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ| ಹರೀಶ್‌ ರಾಮಸ್ವಾಮಿ ಅಭಿಪ್ರಾಯಪಟ್ಟರು.

Advertisement

ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಯಚೂರು ರಿಪೋರ್ಟರ್ ಗಿಲ್ಡ್‌ನಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಒಂದು ಕಾಲದಲ್ಲಿ ಯಲ್ಲೊ ಜರ್ನಲಿಸಂ ಎನ್ನುವ ಪಿಡುಗು ಹೆಚ್ಚಾಗಿತ್ತು. ಇಂದಿಗೂ ಇದೆ. ಆದರೆ, ಈಗ ಹೋಗಿ ನಕಲಿ ಪತ್ರಿಕೋದ್ಯಮ (ಫೇಕ್‌ ಜರ್ನಲಿಸಂ) ಹೆಚ್ಚಾಗುತ್ತಿದೆ. ಅದರಲ್ಲೂ ಸೋಷಿಯಲ್‌ ಮೀಡಿಯಾ ದೊಡ್ಡ ಸವಾಲಾಗಿ ಪರಿಣಮಿಸಿದೆ. ಡಿಜಿಟೈಸಲೇಶನ್‌ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ವಿಶ್ಲೇಷಿಸುವುದೇ ಕಷ್ಟವಾದ ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಕರ್ತರು ಯಾವಾಗಲೂ ಸತ್ಯವನ್ನು ಹೇಳುತ್ತಾರೆ. ಸಮಾಜವನ್ನು ಟೀಕಿಸಿ ಬರೆಯುವುದು ಅವರ ಕಾಯಕ. ಆದರೆ, ಅದಕ್ಕೂ ಒಂದು ಚೌಕಟ್ಟು ಇರುತ್ತದೆ. ಅಂತಹ ಟೀಕೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ದುರಂತವೆಂದರೆ ಸಮಾಜ ಟೀಕೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಯಾವ ಸಮಾಜ ಟೀಕೆ ಒಪ್ಪುವುದಿಲ್ಲವೋ ಆ ಸಮಾಜ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಪ್ರತಿ ಪದ ಬಳಕೆಯಲ್ಲೂ ಜಾಗರೂಕತೆ ಬಹಳ ಮುಖ್ಯ. ನಾವು ಪತ್ರಿಕೆ ಓದುವಾಗ, ಟಿವಿ ನೋಡುವಾಗ ಸೂಕ್ಷ್ಮಗ್ರಾಹಿಗಳಾಗಿರಬೇಕು. ಪ್ರಸಾರವಾಗುವ ಸುದ್ದಿಗಳ ಬಗ್ಗೆ ನಾವು ಕೂಡ ಆಲೋಚನೆ ಮಾಡಬೇಕು. ಅಂದಾಗ ಮಾತ್ರ ಮಾಧ್ಯಮಗಳ ಶ್ರಮ ಸಾರ್ಥಕವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಿಪೋರ್ಟರ್ ಗಿಲ್ಡ್‌ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ದೇಶವನ್ನು ಸದೃಢವಾಗಿ ಕಟ್ಟಬೇಕಾದಾಗ ಮಾಧ್ಯಮಗಳ ಸಹಕಾರ ಬಯಸಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಮಹತ್ವದ ಹೆಜ್ಜೆ ಇಟ್ಟಿದ್ದರು. ಆಗ ಮಾಧ್ಯಮಗಳು ಕೂಡ ತಮ್ಮ ಸೈದ್ಧಾಂತಿಕತೆ ಬಲಿಕೊಡದೆ ಆಡಳಿತಕ್ಕೆ ಸಹಕರಿಸುವ ಭರವಸೆ ನೀಡಿದವು. ಆಗ ಪ್ರಸ್‌ ಕೌನ್ಸಿಲ್‌ ಜಾರಿಯಾಯಿತು ಎಂದು ವಿವರಿಸಿದರು. ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗಾಗಿ ಕ್ರೀಡೆ, ಆರೋಗ್ಯ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೆವು. ಈ ಬಾರಿ ಕನ್ನಡ ಪತ್ರಿಕೆ ಕೊಂಡು ಓದಿರಿ ಎನ್ನುವ ವಿಶೇಷ ಜಾಥಾ ಕಾರ್ಯಕ್ರಮ ನಡೆಸಿದ್ದು ಎಲ್ಲರ
ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲ ಕಾರ್ಯಕ್ರಮಗಳಲ್ಲೂ ಪತ್ರಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದು ವಿಶೇಷ ಎಂದರು.

Advertisement

ರಿಪೋರ್ಟರ್ ಗಿಲ್ಡ್‌ನ ಪ್ರಧಾನ ಕಾರ್ಯದರ್ಶಿ ವಿಜಯ್‌ ಜಾಗಟಗಲ್‌ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್‌ ನಾಗಡದಿನ್ನಿ ಪಾಲ್ಗೊಂಡಿದ್ದರು. ಪತ್ರಕರ್ತರಾದ ವೆಂಕಟೇಶ ಹೂಗಾರ ನಿರೂಪಿಸಿದರು. ಜಗನ್ನಾಥ ದೇಸಾಯಿ ವಂದಿಸಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳ ವಿಜೇತ ಪತ್ರಕರ್ತರಿಗೆ ಪ್ರಮಾಣಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next