Advertisement

‘ಮನೆ ಮನೆಯಲ್ಲೂ ಕೈ ತೋಟ ನಿರ್ಮಾಣವಾಗಲಿ’

02:38 PM Sep 12, 2022 | Team Udayavani |

ದೇರೆಬೈಲ್‌: ಮನೆಯ ಅಡುಗೆ ಕೋಣೆ ವಿಷಯುಕ್ತವಾಗುತ್ತಿರುವುದು ಆತಂಕದ ವಿಚಾರ. ಇದಕ್ಕಾಗಿ ಸಾವಯವ ಕೃಷಿಯ ಮೂಲಕ ಆರೋಗ್ಯಕರ ತರಕಾರಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಗರದಲ್ಲಿ ಜಾಗೃತವಾಗಿರುವುದು ಶ್ಲಾಘನೀಯ. ಮನೆ ಮನೆಯಲ್ಲಿಯೂ ಕೈ ತೋಟದ ಪರಿಕಲ್ಪನೆ ಎಲ್ಲೆಡೆಯೂ ಜಾರಿಯಾಗಲಿ ಎಂದು ದೇರೆಬೈಲ್‌ ಬನಶಂಕರಿ ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್‌ ಹೇಳಿದರು.

Advertisement

“ಉದಯವಾಣಿ’ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಕೆ. ಕೃಷ್ಣ ನಾೖಕ್‌ ಸಹಯೋಗದಲ್ಲಿ ದೇರೆಬೈಲ್‌ ಕೊಂಚಾಡಿಯ ಪರಪಾದೆಯ ನಿವಾಸದಲ್ಲಿ ರವಿವಾರ ನಡೆದ “ಸಾವಯವ ಕೃಷಿ ಸ್ವಾವಲಂಬನೆಯ ಖುಷಿ’ ಸರಣಿಯ “ನಮ್ಮ ಕೈತೋಟ – ನಮ್ಮ ಆಹಾರ’ ಐದನೇ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಬಹುತೇಕ ತರಕಾರಿಗಳಿಗೆ ರಾಸಾಯನಿಕ ಮಿಶ್ರಣವಾಗುತ್ತಿದೆ. ಇದು ಆರೋಗ್ಯಕ್ಕೂ ಅಪಾಯಕಾರಿ. ಹೀಗಾಗಿ ಇರುವ ಜಾಗದಲ್ಲಿ ನಮ್ಮ ಮನೆ ಬಳಕೆಗೆ ಬೇಕಾಗುವಷ್ಟು ತರಕಾರಿ ಮನೆಯಲ್ಲಿಯೇ ಬೆಳೆಯುವ ಮನೋಭಾವ ಬೆಳೆಸಿದರೆ ಉತ್ತಮ. ಇದು ಆರೋಗ್ಯಕ್ಕೂ ಪೂರಕ ಎಂದರು.

ಉದಯವಾಣಿ ಮುಖ್ಯ ವರದಿಗಾರ ವೇಣುವಿನೋದ್‌ ಮಾತನಾಡಿ, “ಉದಯವಾಣಿ ಪತ್ರಿಕೆಯು ಸುದ್ದಿಯ ಜತೆಗೆ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮಗಳಲ್ಲಿ ಬಹುವಾಗಿ ತೊಡಗಿಸಿಕೊಂಡಿದೆ. ಇದರಂತೆ ನಗರ ವ್ಯಾಪ್ತಿಯಲ್ಲಿ ಕೈ ತೋಟ ಅಭಿಯಾನದ ಐದು ಕಾರ್ಯಕ್ರಮಗಳು ನಡೆದಿದ್ದು, ಇನ್ನೂ ಹಲವು ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಆಯೋಜಿಸಲಾಗುವುದು’ ಎಂದರು.

ಪ್ರಸ್ತಾವಿಸಿದ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ಮಾತನಾಡಿ, “ಸಾವಯವ ತರಕಾ ರಿಯ ವಿಚಾರದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂದರ್ಭ ಉದಯವಾಣಿ ನಮಗೆ ಪ್ರೋತ್ಸಾಹ ನೀಡಿ ನಗರದಲ್ಲಿ ಕೈ ತೊಟದ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಅದ್ವಿತೀಯ’ ಎಂದರು.

Advertisement

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನಿವೃತ್ತ ಹಿರಿಯ ಪ್ರಬಂಧಕ ಕೆ. ಕೃಷ್ಣ ನಾೖಕ್‌ ಸ್ವಾಗತಿಸಿದರು. ಲಕ್ಷ್ಮೀ ಎಂ., ಹೇಮಂತ್‌, ಜನಾರ್ದನ್‌, ಜ್ಯೋತಿ ಕೆ. ಮೊದಲಾದವರಿದ್ದರು.

ಆಲಂಕಾರಿಕ ಗಿಡದ ಮೂಲಕ ಮನೆಗೆ ಹೊಸತನ

ನಗರದಲ್ಲಿ ಅಲಂಕಾರಿಕ ಗಿಡಗಳ ಬೇಸಾಯ ವಿಷಯ ಕುರಿತು ಸ್ನೇಹಾ ಭಟ್‌ ಮಾಹಿತಿ ನೀಡಿದರು. “ನಗರದಲ್ಲಿ ತರಕಾರಿ ಅಥವಾ ಗಿಡ ಬೆಳೆಯಲು ಜಾಗ ಇಲ್ಲ ಎಂಬ ಕಾರಣ ನೀಡುವ ಬದಲು, ಇರುವ ಅಲ್ಪ ಜಾಗವನ್ನು ಬಳಸಿಕೊಳ್ಳಲು ಅವಕಾಶವಿದೆ. ಆದರೆ ಅದಕ್ಕೆ ಮನಸ್ಸು ಬೇಕು. ಅಲಂಕಾರಿಕ ಗಿಡಗಳ ಮೂಲಕವೇ ಮನೆಗೆ ಹೊಸತನ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ತಿಳಿದುಕೊಂಡು ಅನುಷ್ಠಾನಿಸುವ ಮನೋಭಾವ ಬೆಳೆಯಲಿ’ ಎಂದರು.

ಕೃಷಿಕ ಹರಿಕೃಷ್ಣ ಕಾಮತ್‌ ಮಾತನಾಡಿ “ಪ್ರಸಕ್ತ ಕೆಲವು ಮಾರುಕಟ್ಟೆಯಲ್ಲಿ ರಾಸಾಯನಿಕ ಸಿಂಪಡಿಸಿದ ತರಕಾರಿಗಳೇ ಲಭಿಸುತ್ತಿವೆ. ತರಕಾರಿ ಬೀಜ ಹಾಳಾಗದಂತೆ ಕೋಟಿಂಗ್‌ ಮಾಡಿ ಕೆಮಿಕಲ್‌ ಸಿಂಪಡಣೆ ಮಾಡುವಲ್ಲಿಂದ ಆರಂಭವಾಗಿ ಗಿಡದ ಬೆಳವಣಿಗೆ ವೇಳೆ ವಿವಿಧ ಹಂತಗಳಲ್ಲಿ ರಾಸಾಯನಿಕ ಬಳಕೆಯೇ ಅಧಿಕವಾಗಿರುವ ಕಾರಣ ನಾವು ಪಡೆದುಕೊಳ್ಳುವ ತರಕಾರಿ ವಿಷಯುಕ್ತವಾಗಿರುತ್ತದೆ. ಇದಕ್ಕೆ ಮುಕ್ತಿ ನೀಡಲು ಸಾವಯವ ಕೃಷಿಗೆ ಆದ್ಯತೆ ನೀಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next