ಲಾಕ್‌ಡೌನ್ ಪ್ರಾರಂಭವಾದ ದಿನದಿಂದ, ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಒಂದು ಕಡೆ ವೈರಸ್ ಕುರಿತ ಚಿಂತೆ. ಇನ್ನೊಂದು ಕಡೆ, ಅಗತ್ಯ ವಸ್ತುಗಳ ಲಭ್ಯತೆ, ಉದ್ಯೋಗದ ಅಭದ್ರತೆ, ಸಂಬಳ ಆಗುತ್ತದೆಯೋ ಇಲ್ಲವೋ ಎಂಬಿತ್ಯಾದಿ ಚಿಂತೆ. ಇಷ್ಟು ವರ್ಷಗಳ ಕಾಲ ಮಾಡಿದ ಸೇವಿಂಗÕ… ಹಣವನ್ನು ಈಗ ತೆಗೆಯಬೇಕಾಗಿ ಬರುತ್ತದೇನೋ ಎಂಬ ಯೋಚನೆ ಬರುವುದೂ ಸಹಜವೇ. ಆದರೆ, ನಾವೆಲ್ಲರೂ ಒಪ್ಪಬೇಕಾದ ಸಂಗತಿಯೆಂದರೆ, ಈ ದಿನಗಳಲ್ಲಿ, ನಮಗೇ ಗೊತ್ತಿಲ್ಲದೆ ನಾವೆಲ್ಲರೂ ಉಳಿತಾಯ ಮಾಡಿದ್ದೇವೆ. ಈಗ, ವರ್ಷಗಳ ಹಿಂದೆಯೇ ಇಂಥ ಜೀವನ ಶೈಲಿ ರೂಢಿಸಿಕೊಂಡಿದ್ದರೆ ಸಾಕಷ್ಟು ಹಣ ಉಳಿಸಬಹುದಿತ್ತು ಅನಿಸಿದ್ದರೆ, ಅದರಲ್ಲಿ ಅಚ್ಚರಿಯೇನೂ ಇಲ್ಲ.
ಅಗತ್ಯವಿದ್ದರೆ ಮಾತ್ರ ಖರೀದಿಸಿ.: ಇದು ಲಾಕ್‌ಡೌನ್ ಕಲಿಸಿದ ಮೊದಲ ಪಾಠ. ನಮ್ಮ ಮನಸ್ಸು ಮರ್ಕಟದಂತೆ. ಅದು ನಾನಾ ಆಕರ್ಷಣೆಗಳಿಗೆ, ಪ್ರಭಾವಗಳಿಗೆ ಒಳಗಾಗುತ್ತಿರುತ್ತದೆ. ಹೀಗಾಗಿ, ಒಂದು ಕ್ಷಣದಲ್ಲಿ ಬೇಕು ಎನಿಸಿದ ವಸ್ತು, ಮರುಕ್ಷಣದಲ್ಲಿಯೇ ಅದು ಅಗತ್ಯವಿಲ್ಲ ಅನ್ನಿಸಬಹುದು. ಹೀಗಾಗಿ, ನಮ್ಮ ಮನಸ್ಸನ್ನು ಅವಲಂಬಿಸುವು ದಕ್ಕಿಂತ, ನಮ್ಮ ಅಗತ್ಯತೆಯನ್ನು ಅವಲಂಬಿಸುವುದು ಸೂಕ್ತ. ಕನಿಷ್ಠ ಸಂಖ್ಯೆಯ ವಸ್ತುಗಳನ್ನು ಇಟ್ಟುಕೊಂಡೇ ಆರಾಮಾಗಿ ಬದುಕಬಹುದು ಎಂಬುದನ್ನು ಲಾಕ್‌ಡೌನ್ ತಿಳಿಸಿಕೊಟ್ಟಿದೆ.
ಮನೆ ಅಡುಗೆಯಿಂದ ಉಳಿತಾಯ: ಹೋಟೆಲ್‌ನಿಂದ ದೂರ ಇದ್ದು ಉಳಿತಾಯ ಇಷ್ಟು ದಿನ, ರೆಸ್ಟೋರೆಂಟು, ಹೋಟೆಲ್‌ಗಳಲ್ಲಿ ನಾಲಗೆಯ ಚಪಲ ತೀರಿಸಿಕೊಳ್ಳುತ್ತಿದ್ದೆವು. ಈಗ ಹೋಟೆಲ್‌ಗಳೆಲ್ಲಾ ಬಂದ್ ಆಗಿರುವು ದರಿಂದ, ಮನೆಯಲ್ಲಿ ಅಡುಗೆ ಮಾಡಬೇಕಾಗಿರುವುದು ಅನಿವಾರ್ಯ. ಆಹಾರಕ್ಕೆ ನಾವು ಎಷ್ಟೊಂದು ಖರ್ಚು ಮಾಡುತ್ತಿದ್ದೆವು ಎನ್ನುವುದು ಈಗ ಅರಿವಾಗುತ್ತಿದೆ. ಮನೆಯಲ್ಲೇ ಅಡುಗೆ ಮಾಡುವುದರಿಂದ ಎಷ್ಟು ಉಳಿತಾಯ ಮಾಡಬಹುದೆಂಬ ಲೆಕ್ಕವೂ ಸಿಕ್ಕಿದೆ.
ಉಳಿದ ಪ್ರಯಾಣದ ಖರ್ಚು: ವರ್ಕ್ ಫ್ರಂ ಹೋಮ್ ಕಾರಣಕ್ಕೆ ಹೆಚ್ಚಿನವರು ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಪ್ರಯಾಣದ ಖರ್ಚು ಉಳಿದಂತಾಗಿದೆ. ಬಸ್/ ರೈಲು, ಇಲ್ಲವೇ ಸ್ವಂತ ವಾಹನಗಳಲ್ಲಿ ಕಚೇರಿಗಳಿಗೆ ತೆರಳುತ್ತಿದ್ದುದರಿಂದ, ಇಷ್ಟು ದಿನ ತಿಂಗಳ ಖರ್ಚಿನಲ್ಲಿ, ಪ್ರಯಾಣದ ಬಿಲ್ ಕೂಡ ಸೇರಿಕೊಳ್ಳುತ್ತಿತ್ತು. ಈಗ, ಆ ಖರ್ಚು ಉಳಿತಾಯವಾದಂತಾಗಿದೆ.