ಬರ್ಹಿ/ಬೊಕಾರೋ: ಕರ್ನಾಟಕದ ವಿಧಾನಸಭೆಗೆ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜನರ ತೀರ್ಪನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ತಿರುಚಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಏರಿದ್ದವು. ಅಂಥ ಪಕ್ಷಗಳಿಗೆ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾರ್ಖಂಡ್‌ನ ಬರ್ಹಿ ಮತ್ತು ಬೊಕಾರೋಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಕರ್ನಾಟಕ ಫಲಿತಾಂಶದ ಬಗ್ಗೆ ಮಾತನಾಡಿದ ಮೋದಿ, 15 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇಶದ ಜನ ಬಿಜೆಪಿಯಲ್ಲಿ ಭರವಸೆ ಇರಿಸಿದ್ದಾರೆ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬರ್ಹಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಕರ್ನಾಟಕದ ಮತದಾರರು ನೀಡಿದ್ದ ತೀರ್ಪನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ತಿರುಚಿ ಹಿಂಬಾಗಿಲಿನಿಂದ ಅಧಿಕಾರ ಪಡೆದುಕೊಂಡಿದ್ದವು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸೀಮಿತ ವ್ಯಾಪ್ತಿಯಲ್ಲಿ ಹಿಡಿತ ಇದೆ ಎಂದು ವಾದಿಸುವವರು ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಆ ರೀತಿ ಮಾತನಾಡುವವರಿಗೆ ಮತದಾರರು ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಪಾಠ ಕಲಿಸಿದ್ದಾರೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರ ಅಭಿವೃದ್ಧಿಯ ಬಗ್ಗೆ ಯಾವುದೇ ರೀತಿಯ ಆದ್ಯತೆ ಹೊಂದಿರಲಿಲ್ಲ.
ಜನರ ತೀರ್ಮಾನವನ್ನು ಹೈಜಾಕ್ ಮಾಡಿ, ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದ ಆ ಎರಡು ಪಕ್ಷಗಳಿಗೆ ಮರೆಯಲಾಗದ ಪಾಠವನ್ನು ಜನ ಕಲಿಸಿದ್ದಾರೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಮೋಸ ಮಾಡದಂತೆ ಇರಲು ಕರ್ನಾಟಕದ ಜನರು ನೋಡಿಕೊಂಡಿದ್ದಾರೆ. ಇನ್ನು ಮುಂದೆ ರಾಜ್ಯದ ಸರ್ಕಾರದಲ್ಲಿ ಯಾವುದೇ ರೀತಿಯ ಅಭದ್ರತೆ ಇರಲಾರದು. ಜನರು ಬಿಜೆಪಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವ ಮೂಲಕ ಸುಭದ್ರ ಸರ್ಕಾರಕ್ಕೆ ಆದ್ಯತೆ ನೀಡಿದ್ದಾರೆ ಎಂದಿದ್ದಾರೆ.
ಅಸಾಧಾರಣ: ಬೊಕಾರೋದಲ್ಲಿ ನಡೆದ ಮತ್ತೂಂದು ರ್ಯಾಲಿಯಲ್ಲಿ ಕರ್ನಾಟಕ ಉಪಚುನಾವಣೆ ಫಲಿತಾಂಶವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ. ಮತದಾರರು ನೀಡಿದ ಫಲಿತಾಂಶ ಅಸಾಧಾರಣವಾದದ್ದು ಎಂದು ಶ್ಲಾಘಿಸಿದ್ದಾರೆ. “ಕರ್ನಾಟಕದ ಚುನಾವಣೆಯಿಂದ ಜಾರ್ಖಂಡ್ ಮತ್ತು ಇತರ ರಾಜ್ಯಗಳಿಗೆ ಮೂರು ರೀತಿಯ ಸಂದೇಶಗಳು ರವಾನೆಯಾಗಿವೆ. ಮೊದಲನೆಯದಾಗಿ, ಜನ ಸುಭದ್ರ ಸರ್ಕಾರವನ್ನು ಬಯಸುತ್ತಾರೆ, ಎರಡನೆಯದಾಗಿ, ಜನಾದೇಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದವರಿಗೆ ಸೂಕ್ತ ರೀತಿಯಲ್ಲಿ ಪಾಠ ಕಲಿಸಲಾಗುತ್ತದೆ, ಮೂರನೇಯದಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ನೀಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸಾಬೀತಾಗಿದೆ’ ಎಂದು ಹೇಳಿದ್ದಾರೆ.